ಗುಜ್ಜಾಡಿ ನರಸಿಂಹ ನಾಯಕ್ ಜನ್ಮಶತಮಾನೋತ್ಸವ ಕಾರ್ಯಕ್ರಮ
ಆರೆಸ್ಸೆಸ್ಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಉಡುಪಿಗೆ
ಉಡುಪಿ, ಜು.24: ಉಡುಪಿಯ ಗುಜ್ಜಾಡಿ ಸ್ವರ್ಣ ಜುವೆಲ್ಲರ್ಸ್ ಸಂಸ್ಥೆಯ ಸಂಸ್ಥಾಪಕರಾದ ಗುಜ್ಜಾಡಿ ನರಸಿಂಹ ನಾಯಕ್ ಅವರ ಜನ್ಮಶತಮಾನೋತ್ಸವ ವರ್ಷದ ಅಂಗವಾಗಿ ಅವರ ಕುಟುಂಬ ಹೊರತರುತ್ತಿರುವ ‘ಗುಜ್ಜಾಡಿ ನರಸಿಂಹ ನಾಯಕ್ ಅವರ ನೆನಪುಗಳು’ ಕೃತಿಯ ಬಿಡುಗಡೆ ಸಮಾರಂಭ ಜು.25ರ ಶನಿವಾರ ಬೆಳಗ್ಗೆ 10:30ಕ್ಕೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ ಎಂದು ನರಸಿಂಹ ನಾಯಕ್ ಅವರ ಪುತ್ರ ಹಾಗೂ ನಗರಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ್ ನಾಯಕ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾ ರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಕೃತಿಯನ್ನು ಬಿಡುಗಡೆಗೊಳಿಸುವುದಲ್ಲದೇ, ಹೌದ್ಧಿಕ್ ನಡೆಸಿಕೊಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿರಿಯ ಲೆಕ್ಕಪರಿಶೋಧಕ ಕೆ. ಉಲ್ಲಾಸ್ ಕಾಮತ್, ವಿಶ್ವ ಹಿಂದೂ ಪರಿಷತ್‌ನ ಹಿರಿಯ ನಾಯಕ ಎಂ.ಎನ್. ನಾಗರಾಜ್ ಹಾಗೂ ‘ಆರ್ಟ್ ಆಫ್ ಜುವೆಲ್ಲರಿ’ ಮುಖ್ಯ ಸಂಪಾದಕ ಸುಮೇಶ್ ವಾಧೇರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಹಿರಿಯ ಪತ್ರಕರ್ತ ಸತೀಶ್ ಮಲ್ಯ ಅವರು ನರಸಿಂಹ ನಾಯಕರೊಂ ದಿಗೆ ನಡೆಸಿದ ವಿಸ್ತ್ರತ ಸಂದರ್ಶನಗಳ ಆಧಾರದ ಮೇಲೆ ಈ ಕೃತಿಯನ್ನು ಆತ್ಮಕಥನ ರೂಪದಲ್ಲಿ ಸಂಪಾದಿಸಲಾಗಿದೆ. ಪುಸ್ತಕದಲ್ಲಿ ಅವರ ವೈಯಕ್ತಿಕ ಮತ್ತು ಕೌಟುಂಬಿಕ ಜೀವನ, ವ್ಯಾಪಾರ ಕ್ಷೇತ್ರದಲ್ಲಿನ ಸಾಧನೆ ಹಾಗೂ ಜಿಲ್ಲೆಯಲ್ಲಿ ಆರೆಸ್ಸೆಸ್ಸ್, ವಿಎಚ್‌ಪಿ, ಜನಸಂಘ ಹಾಗೂ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರದ ಸಾಮಾಜಿಕ ಬದುಕನ್ನು ಮೂರು ಪ್ರತ್ಯೇಕ ವಿಭಾಗಗಳಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವರ್ಣ ಜುವೆಲ್ಲರ್ಸ್‌ನ ಗುಜ್ಜಾಡಿ ರಾಮದಾಸ್ ನಾಯಕ್, ಗುಜ್ಜಾಡಿ ರಘುವೀರ ನಾಯಕ್, ದೀಪಕ್ ನಾಯಕ್ ಹಾಗೂ ಅಭಯ್ ನಾಯಕ್ ಉಪಸ್ಥಿತರಿದ್ದರು.