ಉಡುಪಿ ಜಿಲ್ಲೆಯಲ್ಲಿ ಮತ್ತೆ ಬಿರುಸು ಪಡೆದ ಮಳೆ; ಅಲ್ಲಲ್ಲಿ ಹಾನಿ

Update: 2026-08-01 20:53 IST

ಉಡುಪಿ : ಕಳೆದ 24 ಗಂಟೆಗಳಿಂದ ಉಡುಪಿ ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದಿದೆ. ನಿನ್ನೆ ರಾತ್ರಿ ಪ್ರಾರಂಭಗೊಂಡ ಬಿರುಸಿನ ಮಳೆ ಇಂದು ಇಡೀ ದಿನದಲ್ಲೂ ಮುಂದುವರಿದಿತ್ತು. ಮಳೆಯೊಂದಿಗೆ ಆಗಾಗ ಜೋರಾದ ಗಾಳಿಯೂ ಬೀಸುತಿದ್ದ ಕಾರಣ, ಅಲ್ಲಲ್ಲಿ ಮನೆಗಳಿಗೆ, ತೋಟಗಾರಿಕಾ ಬೆಳೆಗಳಿಗೆ ಹಾನಿಗಿವೆ. ಕೆಲವೊಂದು ಕಡೆ ಮರಗಳು ಉರುಳಿ ಬಿದ್ದಿವೆ.

ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಕುಳಂಜೆ ಗ್ರಾಮದ ವಾದಿರಾಜ್ ನಾಯ್ಕ್ ಎಂಬವರ ಮನೆಯ ಸಮೀಪದ ವಿದ್ಯುತ್ ಕಂಬದ ಮೇಲೆ ಮರ ಬಿದ್ದು, ಅದರಿಂದ ಮನೆಯ ಮೇಲಿನ ಸೀಟ್ ಮಹಡಿ ಹಾಗೂ ದನದ ಕೊಟ್ಟಿಗೆಗೆ ಹಾನಿಯುಂಟಾಗಿದೆ. ಇದರಿಂದ ಅಂದಾಜು 60,000ರೂ. ಗಳ ನಷ್ಟದ ಅಂದಾಜು ಮಾಡಲಾಗಿದೆ.

ಅಮಾಸೆಬೈಲು ಸಮೀಪದ ಮಚ್ಚಟ್ಟು ಗ್ರಾಮದ ತಳ್ಕಿಗದ್ದೆ ಎಂಬಲ್ಲಿ ಜಯರಾಮ ಆಚಾರಿ ಅವರ ವಾಸದ ಮನೆಯ ಮೇಲೆ ಅಡಿಕೆ ಮರ ಬಿದ್ದು, ಮನೆಗೆ ಭಾಗಶ: ಹಾನಿಯುಂಟಾಗಿದೆ. ಇದರಿಂದ 25,000ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಕುಳಂಜೆ ಗ್ರಾಮದ ಚಂದ್ರ ನಾಯ್ಕ್ ಎಂಬವರ ಅಡಿಕೆ ತೋಟ ಬೀಸಿದ ಗಾಳಿ-ಮಳೆಗೆ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ತೋಟದಲ್ಲಿದ್ದ 15ಕ್ಕೂ ಅಧಿಕ ಅಡಿಕೆ ಮರಗಳು ತುಂಡಾಗಿ ನೆಲಕ್ಕುರುಳಿವೆ. ಇದರಿಂದ ಅಂದಾಜು 30,000ರೂ. ನಷ್ಟವಾಗಿರುವುದಾಗಿ ಹೇಳಲಾಗಿದೆ.

ಅದೇ ರೀತಿ ಸಿದ್ಧಾಪುರ ಗ್ರಾಮದ ಶೇಖರ ಶೆಟ್ಟಿ ಎಂಬವರ ತೋಟವೂ ಗಾಳಿ-ಮಳೆಗೆ ಹಾನಿಗೊಳಗಾಗಿದೆ. ತೋಟದಲ್ಲಿದ್ದ ಅಡಿಕೆ ಸಹಿತ ಹಲವು ಮರಗಳಿಗೆ ಹಾನಿಯಾಗಿದ್ದು, 20,000ರೂ. ನಷ್ಟದ ಅಂದಾಜು ಮಾಡಲಾಗಿದೆ.

57.7ಮಿ.ಮೀ. ಮಳೆ: ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಸರಾಸರಿ 57.7ಮಿ.ಮೀ. ಮಳೆ ಬಿದ್ದಿದೆ. ಈ ಬಾರಿ ಹೆಬ್ರಿಯಲ್ಲಿ ಅತ್ಯಧಿಕ 124.8ಮಿ.ಮೀ. ಮಳೆಯಾದ ವರದಿ ಬಂದಿದೆ.

ಇನ್ನು ಕುಂದಾಪುರದಲ್ಲಿ 58.2ಮಿ.ಮೀ., ಕಾರ್ಕಳದಲ್ಲಿ 54.8, ಬ್ರಹ್ಮಾವರದಲ್ಲಿ 47.0, ಬೈಂದೂರಿನಲ್ಲಿ 40.0, ಉಡುಪಿಯಲ್ಲಿ 33.3 ಹಾಗೂ ಕಾಪುವಿನಲ್ಲಿ 27.8ಮಿ.ಮೀ.ಮಳೆಯಾಗಿರುವ ವರದಿಗಳು ಬಂದಿವೆ.

 




 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News