ಉಡುಪಿ: ಆ.2ರಂದು ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇರ ನೇಮಕಾತಿಗೆ ಲಿಖಿತ ಪರೀಕ್ಷೆ; ಮಾರ್ಗಸೂಚಿ ಪ್ರಕಟ

Update: 2026-08-01 20:58 IST

ಉಡುಪಿ, ಆ.1: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಲಿರುವ ಪ್ರಸಕ್ತ ಸಾಲಿನ ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯು ಆಗಸ್ಟ್ 2ರ ರವಿವಾರ ಬೆಳಗ್ಗೆ 10:30ರಿಂದ ಅಪರಾಹ್ನ 12:00 ಗಂಟೆಯವರೆಗೆ ಜಿಲ್ಲೆಯ ಒಟ್ಟು 06 ಅತ್ಯಂತ ಸಂವೇದನಾಶೀಲ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಇವುಗಳಲ್ಲಿ ಒಟ್ಟು 2367 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಆಸ್ಪದ ನೀಡದೆ, ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಜಿಲ್ಲಾಡಳಿತ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವರದಿ ಸಮಯ: ಪರೀಕ್ಷೆಯು ಬೆಳಿಗ್ಗೆ 10:30ಕ್ಕೆ ಪ್ರಾರಂಭಗೊಳ್ಳಲಿದ್ದು, ಅಭ್ಯರ್ಥಿಗಳು ಬೆಳಿಗ್ಗೆ 09:30ರೊಳಗೆ ಕಡ್ಡಾಯವಾಗಿ ಪರೀಕ್ಷಾ ಕೇಂದ್ರದ ಆವರಣದಲ್ಲಿ ಹಾಜರಿರಬೇಕು. ತಪಾಸಣಾ ಪ್ರಕ್ರಿಯೆಗಳು ವಿಳಂಬ ವಾಗುವು ದನ್ನು ತಡೆಯಲು ಮತ್ತು ಭದ್ರತಾ ಪರಿಶೀಲನೆಗೆ ಈ ಸಮಯ ಪಾಲನೆ ಅತ್ಯಗತ್ಯ.

ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಗಾವಲು: ವಾಟ್ಸಾಪ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಯೂಟ್ಯೂಬ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆ, ನಕಲಿ ಪ್ರಶ್ನೆ ಪತ್ರಿಕೆ ಪ್ರಸಾರ ಅಥವಾ ಅಕ್ರಮ ಆರ್ಥಿಕ ವ್ಯವಹಾರ ನಡೆಸುವ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಇತರೆ ಅನ್ವಯಿಸುವ ಕಾನೂನುಗಳಡಿ ಜೈಲು ಶಿಕ್ಷೆ ಸೇರಿದಂತೆ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಅಭ್ಯರ್ಥಿಗಳು ಹಾಗೂ ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುವ ಯಾವುದೇ ನಕಲಿ ಸುದ್ದಿ, ವದಂತಿಗಳು ಅಥವಾ ಅಕ್ರಮ ಆಮಿಷಗಳಿಗೆ ಬಲಿಯಾಗಬಾರದು ಎಂದು ಎಚ್ಚರಿಸಲಾಗಿದೆ.

ಪರೀಕ್ಷಾ ಕೇಂದ್ರದಲ್ಲಿ ನಿಷೇಧಿತ ವಸ್ತುಗಳು: ಪರೀಕ್ಷೆಯ ಪವಿತ್ರತೆಯನ್ನು ಕಾಯ್ದುಕೊಳ್ಳಲು ಈ ಕೆಳಗಿನ ಯಾವುದೇ ವಸ್ತುವನ್ನು ಪರೀಕ್ಷಾ ಕೇಂದ್ರದ ಆವರಣಕ್ಕೆ ಅಥವಾ ಕೊಠಡಿಗೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಲೆಕ್ಟ್ರಾನಿಕ್ ಮತ್ತು ಸಂವಹನ ಸಾಧನಗಳು: ಮೊಬೈಲ್ ಫೋನ್‌ಗಳು, ಬ್ಲೂಟೂತ್ ಸಾಧನಗಳು, ಇಯರ್‌ ಫೋನ್‌ಗಳು, ಮೈಕ್ರೋ ಫೋನ್‌ಗಳು, ಪೇಜರ್‌ಗಳು, ಹೆಡ್‌ಫೋನ್‌ಗಳು, ಸ್ಮಾರ್ಟ್ ವಾಚ್‌ಗಳು, ಕ್ಯಾಮೆರಾ, ಪೆನ್‌ಡ್ರೈವ್‌ಗಳು, ಕ್ಯಾಲ್ಕುಲೇಟರ್‌ಗಳು ಅಥವಾ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿದೆ.

ಲೇಖನ ಸಾಮಾಗ್ರಿಗಳು: ಪೆನ್ಸಿಲ್, ಎರೇಸರ್, ಜಾಮಿಟ್ರಿ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಸ್ಕೇಲ್, ಲಾಗ್ ಟೇಬಲ್, ಯಾವುದೇ ಮುದ್ರಿತ ಅಥವಾ ಕೈಬರಹದ ಚೀಟಿಗಳು, ಬಿಡಿಹಾಳೆಗಳು, ನೋಟ್ ಬುಕ್ ಹಾಗೂ ರೆಕಾಡಿರ್ಂಗ್ ವಸ್ತುಗಳನ್ನು ನಿಷೇಧಿಸಲಾಗಿದೆ. ಇದರೊಂದಿಗೆ ಹ್ಯಾಂಡ್ ಬ್ಯಾಗ್, ಪರ್ಸ್, ವಾಲೆಟ್ (ಹಣದ ಚೀಲ), ಗಾಗಲ್ಸ್ (ಸನ್ ಗ್ಲಾಸ್), ಅಗಲ ಬೆಲ್ಟ್‌ಗಳು, ಕ್ಯಾಪ್ (ಟೋಪಿ) ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾರ್ಥಿಗಳ ಅನುಕೂಲ ಕ್ಕಾಗಿ ಪರೀಕ್ಷಾ ಕೊಠಡಿಗಳಲ್ಲೇ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಮಾಡಲಾಗಿರುತ್ತದೆ.

ವಸ್ತ್ರಸಂಹಿತೆ:ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವಾಗ ಕೆಇಎ ನಿಗದಿ ಪಡಿಸಿದ ಉಡುಪು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಭ್ಯರ್ಥಿ ಗಳು ಉದ್ದ ತೋಳಿನ ಶರ್ಟ್/ಕುರ್ತಾ/ಉಡುಪುಗಳನ್ನು ಧರಿಸಬಾರದು. ಅರ್ಧ ತೋಳಿನ ಸರಳ ಉಡುಪುಗಳನ್ನು ಮಾತ್ರ ಧರಿಸಬೇಕು. ಜೇಬು ಗಳಿರುವ, ದೊಡ್ಡ ಬಟನ್‌ಗಳಿರುವ ಅಥವಾ ಅತಿಯಾದ ವಿನ್ಯಾಸವಿರುವ ಉಡುಪುಗಳನ್ನು ಧರಿಸುವಂತಿಲ್ಲ. ಕಿವಿ, ತಲೆ ಅಥವಾ ಮುಖವನ್ನು ಮುಚ್ಚುವ ಯಾವುದೇ ರೀತಿಯ ಕ್ಯಾಪ್, ಮಾಸ್ಕ್, ಸ್ಕಾರ್ಫ್ ಅಥವಾ ಮುಸುಕನ್ನು ಧರಿಸಿ ಪರೀಕ್ಷೆಗೆ ಬರುವಂತಿಲ್ಲ.

ವಿನಾಯಿತಿ: ಪರೀಕ್ಷಾರ್ಥಿಗಳಿಗೆ ಜನಿವಾರ ಮತ್ತು ಶಿವದಾರ ಧರಿಸಿ ಪರೀಕ್ಷೆಗೆ ಹಾಜರಾಗಲು ಸಂಪೂರ್ಣ ಅವಕಾಶವಿದೆ. ಮಹಿಳಾ ಅಭ್ಯರ್ಥಿಗಳಿಗೆ ಕೇವಲ ಮೂಗುತಿ ಮತ್ತು ಮಂಗಳಸೂತ್ರ ಧರಿಸಲು ಮಾತ್ರ ವಿನಾಯಿತಿ ನೀಡಲಾಗಿದೆ.

ಧಾರ್ಮಿಕ ಉಡುಪು: ಧಾರ್ಮಿಕ ಸಂಪ್ರದಾಯದ ಉಡುಪುಗಳನ್ನು ಧರಿಸಿ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳು ಪ್ರತ್ಯೇಕ ಭದ್ರತಾ ಪರಿಶೀಲನೆ ಗೊಳಪಡಬೇಕಾಗಿರುವುದರಿಂದ ಪರೀಕ್ಷೆ ಆರಂಭಕ್ಕೆ 2 ಗಂಟೆಗಳ ಮುಂಚಿತ ವಾಗಿ (ಅಂದರೆ ಬೆಳಿಗ್ಗೆ 08:30 ಗಂಟೆಗೆ) ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು.

ಕಟ್ಟುನಿಟ್ಟಿನ ಭದ್ರತೆ: ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯಲು ಜಾಮರ್‌ಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಪರೀಕ್ಷಾ ಕೇಂದ್ರ ಹಾಗೂ ಕೊಠಡಿಗಳ ಮೇಲೆ ತೀವ್ರ ನಿಗಾ ವಹಿಸಲು ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಪ್ರಾಧಿಕಾರದ ಕಚೇರಿಯಲ್ಲಿ ಸ್ಥಾಪಿಸಲಾದ ’ಕಮಾಂಡ್ ಸೆಂಟರ್’ ಮೂಲಕ ನೇರ ಮೇಲ್ವಿಚಾರಣೆ ನಡೆಸಲಾಗುವುದು. ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಮುಖ ಚಹರೆ ಗುರುತಿಸುವ ತಂತ್ರಜ್ಞಾನ ಮೂಲಕ ಅಭ್ಯರ್ಥಿಗಳ ಗುರುತನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುವುದು. ಎಲ್ಲಾ ಪರೀಕ್ಷಾ ಕೊಠಡಿಗಳಲ್ಲೂ ಸಿಸಿಟಿವಿ ಕಣ್ಗಾವಲು ಇರಲಿದೆ.

ನಿಷೇೀಧಾಜ್ಞೆ ಜಾರಿ, ಪೊಲೀಸ್ ಬಂದೋಬಸ್ತ್:ಪರೀಕ್ಷಾ ಅಕ್ರಮಗಳನ್ನು ತಡೆಯಲು ಮತ್ತು ಅನಗತ್ಯ ಜನಸಂದಣಿ ಯನ್ನು ನಿಯಂತ್ರಿಸಲು ಎಲ್ಲಾ 06 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200ಮೀ. ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿಯಾದ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪ್ರತಿ 100 ಅಭ್ಯರ್ಥಿಗಳ ದೈಹಿಕ ತಪಾಸಣೆಗಾಗಿ ತಲಾ ಒಬ್ಬರಂತೆ ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅಧಿಕಾರಿಗಳ ನೇಮಕ: ಸುಗಮ ನಿರ್ವಹಣೆಗಾಗಿ ಮಾರ್ಗಾಧಿಕಾರಿಗಳು, ವೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು, ವಿಶೇಷ ಜಾಗೃತ ದಳ ಹಾಗೂ ವಸ್ತ್ರ ಸಂಹಿತೆ ಪರಿಶೀಲನಾ ಅಧಿಕಾರಿಗಳನ್ನು ನೇುಸಲಾಗಿದೆ. ಅಭ್ಯರ್ಥಿಗಳ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ಸ್ಪಂದಿಸಲು ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಆಂಬುಲೆನ್ಸ್, ಅರ್ಹ ವೈದ್ಯಕೀಯ ಸಿಬ್ಬಂದಿ ಹಾಗೂ ತುರ್ತು ಮುನ್ನೆಚ್ಚರಿಕೆ ಔಷಧಗಳ ಲಭ್ಯತೆಯನ್ನು ಖಚಿತಪಡಿಸಲಾಗಿದೆ.

ನಿರಂತರ ವಿದ್ಯುತ್ ಪೂರೈಕೆ: ಪರೀಕ್ಷೆಯ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಸೂಕ್ತ ಕ್ರಮ ವಹಿಸಲು ಮೆಸ್ಕಾಂ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಎಲ್ಲಾ ಮಾರ್ಗಸೂಚಿಗಳನ್ನು ಅಭ್ಯರ್ಥಿಗಳು ಮತ್ತು ಪೋಷಕರು ಪಾಲಿಸಿ, ಪರೀಕ್ಷೆಯು ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತದೊಂದಿಗೆ ಸಂಪೂರ್ಣವಾಗಿ ಸಹಕರಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News