ಯಕ್ಷ ಕಲಾವಿದ ಕೊಕ್ಕುಡ್ತಿ ಕೃಷ್ಣಮೂರ್ತಿ ನಿಧನ
ಉಡುಪಿ: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದರಾದ ಕೊಕ್ಕುಡ್ತಿ ಕೃಷ್ಣ ಮೂರ್ತಿ(75) ರವಿವಾರ ನಿಧನರಾದರು. ಅವರು ನಾಲ್ವರು ಪುತ್ರರು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.
ಕೊಕ್ಕುಡ್ತಿ ಕೃಷ್ಣಮೂರ್ತಿ ನಾಡಿನ ಪ್ರಸಿದ್ಧ ಬಯಲಾಟ ಮೇಳಗಳಾದ ಶ್ರೀ ಕ್ಷೇತ್ರ ಮಂದಾರ್ತಿ, ಮಾರಣಕಟ್ಟೆ, ಶಿವರಾಜಪುರ, ಶ್ರೀಕ್ಷೇತ್ರ ಸೋಮವಾರ ಸಂತೆ, ಗೋಳಿಗರಡಿಮೇಳ ಸೇರಿದಂತೆ ಅನೇಕ ಮೇಳಗಳಲ್ಲಿ ಸುಮಾರು 50 ವರ್ಷಕ್ಕೂ ಹೆಚ್ಚು ಕಾಲ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಎಲ್ಲಾ ರೀತಿಯ ಪೌರಾಣಿಕ ಪುರುಷ ಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸಿ ಕಲಾರಸಿಕರ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು.
ಯಕ್ಷಗಾನ ಕ್ಷೇತ್ರದಲ್ಲಿ ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆು ಪ್ರಶಸ್ತಿ ನೀಡಿ ಗೌರಸಿತ್ತು. ಉಡುಪಿಯ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯು ಸೇರಿದಂತೆ ಅನೇಕ ಪ್ರಶಸ್ತಿ ಹಾಗೂ ಸನ್ಮಾನಕ್ಕೆ ಇವರು ಪಾತ್ರರಾಗಿದ್ದರು. ಕೆ.ಕೃಷ್ಣಮೂರ್ತಿ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತ ಪಡಿಸಿದ್ದಾರೆ.