ಮರವಂತೆ: ಮತ್ತೆ ಆರಂಭಗೊಂಡ ಮೀನುಗಾರಿಕಾ ಚಟುವಟಿಕೆ

Update: 2026-08-07 18:59 IST

ಕುಂದಾಪುರ: ಕಳೆದೆರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಮೀನುಗಾರಿಕಾ ಚಟುವಟಿಕೆ ಇದೀಗ ಮರವಂತೆಯ ಮೀನುಗಾರಿಕಾ ಹೊರ ಬಂದರಿನಲ್ಲಿ ಗುರುವಾರದಿಂದ ಮತ್ತೆ ಆರಂಭಗೊಂಡಿದೆ.

ಕಳೆದೆರಡು ದಿನಗಳಿಂದ ಮಳೆ ತುಸು ಕಡಿಮೆಯಾದ ಹಿನ್ನೆಲೆಯಲ್ಲಿ ಮರವಂತೆಯ ಮೀನುಗಾರರು ಕಡಲಿಗೆ ಇಳಿ ದಿದ್ದು, ಮತ್ಸ್ಯ ಬೇಟೆ ಆರಂಭಿಸಿದ್ದಾರೆ. ಬುಧವಾರ ಸಣ್ಣ ದೋಣಿಯವರೆಲ್ಲ ಈ ಋತುವಿನಲ್ಲಿ ಮೊದಲ ಬಾರಿಗೆ ಸಮುದ್ರಕ್ಕಿಳಿದಿದ್ದರೆ, ಗುರುವಾರ ದೊಡ್ಡ ದೋಣಿಯವರು ಕೂಡ ಮೀನುಗಾರಿಕೆಗೆ ತೆರಳಿದ್ದಾರೆ. ವಿಪರೀತ ಮಳೆ, ಪ್ರಕ್ಷುಬ್ಧ ಕಡಲಿನ ವಾತಾವರಣದಿಂದಾಗಿ ದೋಣಿಯವರು ಕೂಡ ಈವರೆಗೆ ಮೀನುಗಾರಿಕೆ ತೆರಳಿರಲಿಲ್ಲ.

ಮರವಂತೆಯ ಹೊರಬಂದರಿನಲ್ಲಿ ಗುರುವಾರ ಭರ್ಜರಿ ಮೀನುಗಾರಿಕಾ ವಹಿವಾಟು ನಡೆಯಿತು. ಮರವಂತೆ ಮಾತ್ರವಲ್ಲದೆ, ನಾವುಂದ, ಕೊಡೇರಿ, ಉಪ್ಪುಂದ, ಬೈಂದೂರು ಭಾಗದ ದೋಣಿಯವರ ಸಹಿತ ಸುಮಾರು 700 ಕ್ಕೂ ಮಿಕ್ಕಿ ಸಣ್ಣ ಹಾಗೂ ದೊಡ್ಡ ದೋಣಿಯವರು ಕೂಡ ಮೀನು ಇಳಿಸಲು ಈ ಮರವಂತೆಯ ಹೊರಬಂದರನ್ನೇ ಆಶ್ರಯಿಸಿದ್ದರು. ಇಲ್ಲಿ ಬಂದರಿನೊಳಗೆ ಬರಲು ಸುರಕ್ಷಿತ ವ್ಯವಸ್ಥೆ ಇರುವುದರಿಂದ ಹೆಚ್ಚಿನವರು ಮೀನುಗಾರಿಕೆ ಮುಗಿಸಿ, ಮರವಂತೆಯ ಬಂದರಿಗೆ ಆಗಮಸಿದ್ದರು.

ಈ ಋತುವಿನ ಮೊದಲ ದಿನದ ಮೀನುಗಾರಿಕೆ ಅಂತಹ ಮೀನಿನ ಸುಗ್ಗಿಯಾಗದಿದ್ದರೂ, ಮೀನುಗಾರರಿಗೆ ನಿರಾಶೆ ಏನು ಉಂಟು ಮಾಡಿರಲಿಲ್ಲ. ಸಣ್ಣ ಹಾಗೂ ದೊಡ್ಡ ಪ್ರಮಾಣದ ಸಿಗಡಿ, ಅಡವು ಮೀನು, ಅಂಜಲ್ ಹಾಗೂ ಬಂಗುಡೆ ಮೀನುಗಳು ಸಾಧಾರಣ ಪ್ರಮಾಣದಲ್ಲಿ ಸಿಕ್ಕಿವೆ. ಅಂತಹ ಉತ್ತಮ ಪ್ರಮಾಣದಲ್ಲಿ ಮೀನುಗಾರಿಕೆಯಾಗಿದ್ದರೂ, ಯಾರಿಗೂ ನಷ್ಟವೇನು ಆಗಿಲ್ಲ. ಸಿಗಡಿ ಉತ್ತಮ ಪ್ರಮಾಣದಲ್ಲಿ ಸಿಕ್ಕಿವೆ ಎಂದು ಮರವಂತೆಯ ಮೀನುಗಾರರಾದ ಮೋಹನ್ ಖಾರ್ವಿ. 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News