ನಮ್ಮೂರನ್ನು ಆಳಿದ ರಾಜರ ಇತಿಹಾಸವನ್ನು ಅರಿತುಕೊಳ್ಳಿ: ತಾರಾನಾಥ

‘ಅಳುಪರ ಆಡಳಿತ ಐತಿಹಾಸಿಕ ದಾಖಲೆ’ ವಿಚಾರ ಸಂಕಿರಣ

Update: 2026-08-06 21:53 IST

ಉಡುಪಿ, ಆ.6:ನಾವು ದೇಶ-ವಿದೇಶಗಳ ರಾಜ-ಮಹಾರಾಜರ ಇತಿಹಾಸಗಳನ್ನು ಕಲಿಯುತ್ತೇವೆ. ಇತಿಹಾಸ ಪಠ್ಯ ಪುಸ್ತಕಗಳಲ್ಲಿ ದೊಡ್ಡ ದೊಡ್ಡ ಚಕ್ರವರ್ತಿಗಳ ಚರಿತ್ರೆ ಇರುತ್ತದೆ. ಆದರೆ ನಮ್ಮ ಊರುಗಳನ್ನು ಆಳಿದ ಸಾಮಂತ ರಾಜರ ಬಗ್ಗೆ ಎಲ್ಲೂ ಮಾಹಿತಿ ಇರುವುದಿಲ್ಲ. ಸಣ್ಣ ರಾಜರ ಇತಿಹಾಸದ ಬಗೆಗೆ ಆಕರಗಳೂ ಸಿಗುವುದಿಲ್ಲ. ಆದ್ದರಿಂದ ನಮ್ಮೂರನ್ನು ಆಳಿದ ರಾಜರ ಸಾಮಂತರ ಇತಿಹಾಸವನ್ನೂ ವಿದಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಿವಿಮಾತು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಉಡುಪಿಯ ಶ್ರೀಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಕಾಲೇಜಿನ ವಿಭುದೇಶ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಅಳುಪೆರೆನ ಆಡಳಿತ ಐತಿಹಾಸಿಕ ದಾಖಲಾತಿಲು’ ವಿಷಯದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಲೋಕದ ಇತಿಹಾಸವನ್ನು ನಾವು ತಿಳಿದುಕೊಳ್ಳುತ್ತೇವೆ. ಆದರೆ ನಮ್ಮ ಊರಿನ ಇತಿಹಾಸದ ಬಗ್ಗೆ ನಮ್ಮ ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ಇರುವುದಿಲ್ಲ. ನಾವು ನಮ್ಮೂರಿನ ಚರಿತ್ರೆಯನ್ನು ಅಗತ್ಯವಾಗಿ ತಿಳಿದುಕೊಳ್ಳಬೇ ಕಾಗಿದೆ ಎಂದವರು ನುಡಿದರು.

ಇತಿಹಾಸಜ್ಞರಾಗಿರುವ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಉಡುಪಿ ಜಿಲ್ಲೆಯ ಉದ್ಯಾವರದ ಇತಿಹಾಸವು ಕಡಲಿನಂತೆ ವಿಸ್ತಾರವಾಗಿದೆ. ಅಳುಪ ಅರಸರ ರಾಜಧಾನಿ ಯಾಗಿ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಕೇಂದ್ರ ಅದಾಗಿತ್ತು’ ಎಂದು ಅಳುಪರ ಕುರಿತು ವಿವರಿಸಿದರು.

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಚಂದ್ರಕಾಂತ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಮೂಡಬಿದರೆಯ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಪುಂಡಿಕಾ ಗಣಪಯ್ಯ ಭಟ್ ಅಳುಪರ ಕುರಿತು ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಪೂರ್ಣಿಮಾ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಆಡಳಿತ ಮಂಡಳಿ ಸದಸ್ಯ ಜಯಪ್ರಕಾಶ್ ಕೆದ್ಲಾಯ, ಸ್ನೇಹಾ ಎಸ್., ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು. ಪ್ರೇಮನಾಥ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News