ಮರಕ್ಕೆ ದ್ವಿಚಕ್ರ ವಾಹನ ಢಿಕ್ಕಿ: ಸವಾರ ಮೃತ್ಯು
ಮಣಿಪಾಲ, ಆ.11: ಬುಲೆಟೊಂದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಹೆರ್ಗ ಗ್ರಾಮದ ಕೆಳಪರ್ಕಳ ಇಳಿಜಾರಿನಲ್ಲಿರುವ ಗೋಪಾಲಕೃಷ್ಣ ದೇವಸ್ಥಾನದ ಬಳಿ ಆ.11ರಂದು ನಸುಕಿನ ವೇಳೆ 1.25ರ ಸುಮಾರಿಗೆ ನಡೆದಿದೆ.
ಮೃತರನ್ನು ಆತ್ರಾಡಿ ನಿವಾಸಿ ಸನತ್(21) ಎಂದು ಗುರುತಿಸಲಾಗಿದೆ. ಇವರು ಗೆಳೆಯರೊಂದಿಗೆ ಮಣಿಪಾಲದಲ್ಲಿ ರಾತ್ರಿ ಊಟ ಮುಗಿಸಿ, ಗೆಳೆಯ ಆಶಿಶ್ ಎಂಬವರ ಬುಲೆಟ್‌ನ್ನು ಸವಾರಿ ಮಾಡಿಕೊಂಡು ಮನೆಗೆ ಹೋದರು. ಮಣಿಪಾಲ ಕಡೆಯಿಂದ ಪರ್ಕಳ ಕಡೆಗೆ ಹೋಗುತ್ತಿದ್ದ ಬುಲೆಟ್, ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರನ ನಿಯಂತ್ರಣ ತಪ್ಪಿ, ಇಳಿಜಾರಿನಲ್ಲಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರ ಪರಿಣಾಮ ಸನತ್, ಬುಲೆಟ್ ಸಮೇತ ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟರು. ಇದರಿಂದ ಗಂಭೀರವಾಗಿ ಗಾಯಗೊಂಡ ಸನತ್, ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.