ಪುಸ್ತಕದ ಸಂಸ್ಕೃತಿ ಮಸ್ತಕದ ಸಂಸ್ಕೃತಿಯಾಗಬೇಕಾಗಿದೆ: ಡಾ.ಮಾನಸ

Update: 2026-08-18 19:12 IST

ಉಡುಪಿ, ಆ.18: ಮನೆಯಲ್ಲಿ ಪೂಜಾ ಮನೆ ಇದ್ದಹಾಗೆ ಪ್ರತಿ ಮನೆಯಲ್ಲಿಯೂ ಕೂಡ ಒಂದು ಸಣ್ಣ ಗ್ರಂಥಾಲಯ ಇರಬೇಕು. ಪುಸ್ತಕದ ಸಂಸ್ಕೃತಿ ಮಸ್ತಕದ ಸಂಸ್ಕೃತಿ ಆಗಬೇಕಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಅಧ್ಯಕ್ಷ ಡಾ.ಮಾನಸ ಹೇಳಿದ್ದಾರೆ.

ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಅಭಿಯಾನದ ಅನುಷ್ಠಾನ ಸಮಿತಿ ವತಿಯಿಂದ ಮಂಗಳವಾರ ಕೊಡವೂರಿನ ಭಾಮಾ ನಿಲಯದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬದುಕುವ ಕಲೆ ಪುಸ್ತಕ ಹೇಳಿಕೊಡುತ್ತದೆ ಪುಸ್ತಕವನ್ನು ಪ್ರೀತಿಸಿದಾಗ ಬದುಕು ಮತ್ತಷ್ಟು ಸುಂದರವಾಗುತ್ತದೆ, ಈ ನಿಟ್ಟಿನಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ನಡೆಸಲಾಗುತ್ತಿ ಎಂದ ಅವರು, ಕಾಲೇಜು ವಿದ್ಯಾರ್ಥಿಗಳಿಗೆ ತಿಂಗಳ ತಿರುಳು ಕಾರ್ಯಕ್ರಮದ ಮೂಲಕ ಅನೇಕ ಸಾಹಿತಿಗಳ ಪುಸ್ತಕ ಪರಿಚಯ ಮಾಡಿಕೊಡಲಾಗುತ್ತಿದೆ. ಭಕ್ತಿಯ ಭವನ ಭಯದ ಭವನವಾಗದೆ, ಜ್ಞಾನದ ಭವನವಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಅನೇಕ ವೈವಿಧ್ಯಪೂರ್ಣ ಕಾರ್ಯಕ್ರಮಗಳಿಂದ ರಾಜ್ಯದ ಜನರ ಮನೆ ಮಾತಾಗಿದೆ. ಇಂತಹ ಅತ್ಯುತ್ತಮ ಕಾರ್ಯ ನಡೆಸಿದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಜನಾರ್ದನ್ ಕೊಡವೂರು ಹಾಗು ಲೇಖಕಿ ಪೂರ್ಣಿಮಾ ಜನಾರ್ದನ್ ದಂಪತಿಗೆ ಪ್ರಮಾಣ ಪತ್ರದೊಂದಿಗೆ ಗೌರವಿಸಲಾಯಿತು. ಗಾಂಧಿ ಆಸ್ಪತ್ರೆಯ ಸಂಸ್ಥಾಪಕ ಎಂ.ಹರೀಶ್ಚಂದ್ರ, ಡಾ. ರಾಜಲಕ್ಷ್ಮೀ, ಮೋಹನ್ ಉಡುಪ ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ಮತ್ತು ಮನೆಗೊಂದು ಗ್ರಂಥಾಲಯ ಅಭಿಯಾನದ ಜಿಲ್ಲಾ ಸಹ ಸಂಚಾಲಕ ರವಿರಾಜ್ ಎಚ್.ಪಿ. ಪ್ರಸ್ತಾವನೆಗೈದರು. ಜನಾರ್ದನ್ ಕೊಡವೂರು ಸ್ವಾಗತಿಸಿದರು. ಅಭಿಯಾನದ ಜಿಲ್ಲಾ ಸದಸ್ಯ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News