ಸಾಂವಿಧಾನಿಕ ನೈತಿಕತೆಯಿಂದಲೇ ಸಮಾನತೆ ಸಾಧ್ಯ: ಡಾ.ಪ್ರಸಾದ್ ರಾವ್
ಉಡುಪಿ, ಆ.24: ಧರ್ಮಾಧಾರಿತ ನೈತಿಕತೆಗಿಂತ ಸಾಂವಿಧಾನಿಕ ನೈತಿಕತೆಯನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಮಾನತೆಯನ್ನು ಸಾಧಿಸಲು ಸಾಧ್ಯ ಎಂದು ಬಾರಕೂರು ಎಸ್‌ಆರ್‌ಎಸ್‌ಎಂಎನ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಸಾದ್ ರಾವ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಸಹಯೋಗದಲ್ಲಿ ಸೋಮವಾರ ನಡೆದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮ’ದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತಿದ್ದರು.
ಅಂಬೇಡ್ಕರ್ ಅವರ ವಿಚಾರಧಾರೆ ಹಾಗೂ ಬದುಕನ್ನು ಅಧ್ಯಯನ ಮಾಡುವುದರಿಂದ ಸ್ವಾತಂತ್ರ್ಯ ಮತ್ತು ಜವಾಬ್ದಾರಿಯ ಅರಿವು ಬೆಳೆಸಿ ಕೊಳ್ಳಬಹುದು. ಅವರ ಚಿಂತನೆಗಳನ್ನು ಅಳವಡಿಸಿಕೊಂಡು ವೈಯಕ್ತಿಕ ಆಶೋತ್ತರ ಗಳನ್ನು ಈಡೇರಿಸಿಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದರು.
ಅಂಬೇಡ್ಕರ್ ಅವರನ್ನು ಮೂರು ರೀತಿಯಲ್ಲಿ ಓದಬೇಕು. ವಿದ್ಯಾರ್ಥಿಗಳು ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಮೂರು ರೀತಿಯಲ್ಲಿ ಓದುವ ಮೂಲಕ ಅವರ ವಿಚಾರಧಾರೆ ಹಾಗೂ ಅಧ್ಯಯನದ ಆಳವನ್ನು ಅರಿತುಕೊಳ್ಳಬೇಕು. ಅಂಬೇಡ್ಕರ್ ಏನನ್ನು ಓದಿದ್ದರು ಎಂಬುದನ್ನು ತಿಳಿದು ಕೊಂಡು, ಅವರ ಅಧ್ಯಯನದ ವ್ಯಾಪ್ತಿಯನ್ನು ಅರ್ಥ ಮಾಡಿ ಕೊಳ್ಳಬೇಕು ಎಂದು ಅವರು ಹೇಳಿದರು.
ಮರಾಠಿ ಭಾಷಿಕರಾಗಿದ್ದ ಅಂಬೇಡ್ಕರ್, ಸಂಸ್ಕೃತ, ಪಾಲಿ, ಹಿಂದಿ, ಜರ್ಮನ್, ಇಂಗ್ಲಿಷ್ ಹಾಗೂ ಫ್ರೆಂಚ್ ಸೇರಿದಂತೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಅಪಾರ ಓದುಗರಾಗಿದ್ದ ಅವರು ಸುಮಾರು 50 ಸಾವಿರ ಪುಸ್ತಕ ಗಳನ್ನು ಓದಿ, ಅವುಗಳ ಕುರಿತು ಟಿಪ್ಪಣಿಗಳನ್ನು ಬರೆದಿದ್ದರು ಎಂದು ಅವರು ತಿಳಿಸಿದರು.
ಅಂಬೇಡ್ಕರ್ ಮಹಾತ್ಮ ಗಾಂಧೀಜಿ, ವಿನಾಯಕ ದಾಮೋದರ ಸಾವರ್ಕರ್ ಹಾಗೂ ಡಬ್ಲ್ಯೂಇಬಿಡು ಬಾಯ್ಸ್ ಅವರಿಗೆ ಬರೆದ ಪತ್ರಗಳನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು. ಅವರು ರಚಿಸಿದ ಜಾತಿ ವಿನಾಶ’ ಕೃತಿಯ ಅಧ್ಯಯನವು ನಮ್ಮ ಚಿಂತನಾ ಕ್ರಮವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಕವಿ ಸಿದ್ದಲಿಂಗಯ್ಯ ಅವರು ಅಂಬೇಡ್ಕರ್ ಕುರಿತು ಬರೆದಿರುವ ಕೃತಿಗಳನ್ನೂ ವಿದ್ಯಾರ್ಥಿಗಳು ಓದಬೇಕು. ಅಂತರ್ಜಾಲದಲ್ಲಿ ಲಭ್ಯವಿರುವ ವಿಶ್ವಾಸಾರ್ಹ ಮಾಹಿತಿಗಳನ್ನು ಅಧ್ಯಯನ ಮಾಡುವ ಮೂಲಕ ಅಂಬೇರ್ಡ್ಕ ಅವರ ವಿಚಾರಗಳನ್ನು ಮತ್ತಷ್ಟು ಆಳವಾಗಿ ತಿಳಿದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ಅಂಬೇಡ್ಕರ್ ಅವರ ಮೌಲ್ಯಗಳು ಸಾರ್ವಕಾಲಿಕವಾಗಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಿಕೇತನ ಮಾತನಾಡಿ, ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರಗಳಿವೆ. ಅಂಬೇಡ್ಕರ್ ಪ್ರತಿಪಾದಿಸಿದ ಎಲ್ಲರನ್ನು ಒಳಗೊಳ್ಳುವಿಕೆ’ಯ ಆಶಯವನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ಅಂಬೇಡ್ಕರ್ ಕುರಿತು ನಡೆದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾ ಯಿತು. ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರೊ.ಶ್ರೀಮತಿ ಅಡಿಗ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ರಾಜೇಂದ್ರ ಕೆ. ಮಂಜುನಾಥ್ ಉಪಸ್ಥಿತರಿದ್ದರು. ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಆಶಾ ಕಾರ್ಯಕ್ರಮ ನಿರೂಪಿಸಿದರು.