ಸೆ. 8ರಂದು ಕ್ರೈಸ್ತರ ತೆನೆ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಕಥೊಲಿಕ್ ಸಭಾದಿಂದ ಸರಕಾರಕ್ಕೆ ಮನವಿ

Update: 2026-08-23 21:47 IST

ಉಡುಪಿ: ಕರಾವಳಿಯ ಕ್ರೈಸ್ತರು ಸಪ್ಟೆಂಬರ್ 8 ರಂದು ಆಚರಿಸುವ ಮೇರಿ ಮಾತೆಯ ಜನ್ಮದಿನವಾದ ಮೊಂತಿ ಫೆಸ್ತ್ ಅಥವಾ ತೆನೆ ಹಬ್ಬಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಲೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡು ವಂತೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ನೇತೃತ್ವದಲ್ಲಿ ಕಥೊಲಿಕ್ ಸಭಾ ಮಂಗಳೂರು ಮತ್ತು ಉಡುಪಿ ಪ್ರದೇಶ ವತಿಯಿಂದ ರಾಜ್ಯ ಆರೋಗ್ಯ ಸಚಿವರು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

ಕರಾವಳಿ ಹಾಗೂ ಇಡೀ ರಾಜ್ಯದ ಕ್ರೈಸ್ತ ಬಾಂಧವರು ಪ್ರತಿ ವರ್ಷ ಸಪ್ಟೆಂಬರ್-8 ದಿನಾಂಕವನ್ನು ಅನಾದಿಕಾಲ ದಿಂದಲೂ ವಿಶೇಷ ಕುಟುಂಬ ಹಬ್ಬದ ದಿನವನ್ನಾಗಿ ಆಚರಿಸುತ್ತಾ ಬಂದಿದ್ದು, ಈ ದಿನವು ದೇವಮಾತೆ ಕನ್ಯಾ ಮರಿಯಮ್ಮನವರ ಜನ್ಮ ದಿನವಾಗಿದ್ದು, ಅದೇ ದಿನ ಕರಾವಳಿ ಹಾಗೂ ಇಡೀ ರಾಜ್ಯದ ಕ್ರೈಸ್ತ ಬಾಂಧವರು ತೆನೆ ಹಬ್ಬವನ್ನಾಗಿ ಆಚರಿಸುತ್ತಾರೆ. ಈ ದಿನದಂದು ರೈತರು ಬೆಳೆದ ಹೊಸ ಫಸಲನ್ನು ದೇವರಿಗೆ ಅರ್ಪಿಸಿ, ದೇವಾಲಯ ಗಳಲ್ಲಿ ಪೂಜಾವಿಧಿಗಳನ್ನು ನೆರವೇರಿಸಿ ಕುಟುಂಬದ ಸಹ ಭೋಜನದೊಂದಿಗೆ ಸಂಭ್ರಮಾಚರಣೆ ನಡೆಸಲಾಗುತ್ತದೆ. ಇಡೀ ರಾಜ್ಯಾದ್ಯಂತ ಕ್ರೈಸ್ತ ಬಾಂಧವರು ಸಪ್ಟೆಂಬರ್ 8 ರಂದು ಆಚರಿಸುವ ಮರಿಯ ಜಯಂತಿ/ತೆನೆ ಹಬ್ಬಕ್ಕೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಸಾರ್ವತ್ರಿಕ ರಜಾ ನೀಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.

ನಿಯೋಗದಲ್ಲಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷರಾದ ಸಂತೋಷ್ ಡಿಸೋಜಾ, ಉಪಾಧ್ಯಕ್ಷರಾದ ಸ್ಟೀವನ್ ರೊಡ್ರಿಗಸ್, ರಾಜಕೀಯ ಸಂಚಾಲಕರಾದ ಸ್ಟ್ಯಾನಿ ಲೋಬೊ, ಉಡುಪಿ ಅಧ್ಯಕ್ಷರಾದ ಮೆಲ್ವಿನ್ ಆರಾನ್ಹಾ ಶಿರ್ವ, ಕಾರ್ಯದರ್ಶಿ ಜೂಲಿಯೆಟ್ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News