ಸಾಂದರ್ಭಿಕ ಚಿತ್ರ

ಕಾರ್ಕಳ : ಮಂಗಳೂರು ರೈಲ್ವೆ ವ್ಯವಸ್ಥೆಯನ್ನು ಕಳೆದ ಸುಮಾರು 25 ವರ್ಷಗಳಿಂದ ಹೊಂದಿದ್ದ ಕೇರಳದ ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ಕರ್ನಾಟಕದ ಮೈಸೂರು ರೈಲ್ವೆ ವಿಭಾಗಕ್ಕೆ ಸೇರ್ಪಡೆಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವು ಕರ್ನಾಟಕದ ರೈಲ್ವೆ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಎಂದು ಸಹಕಾರ ಭಾರತಿ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಹೇಳಿದ್ದಾರೆ.

ಕೇಂದ್ರ ರೈಲ್ವೆ ಸಚಿವಾಲಯ ಈಗಾಗಲೇ ನಿರ್ಧಾರ ಕೈಗೊಂಡಿದ್ದು, ಅಕ್ಟೋಬರ್ 1ರಿಂದ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವ ವಿ. ಸೋಮಣ್ಣ ಅವರು ಸ್ಪಷ್ಟಪಡಿಸಿರುವುದು ಸ್ವಾಗತಾರ್ಹ. ಕೇರಳ ಸರ್ಕಾರದ ವಿರೋಧ ಅಥವಾ ಪ್ರತಿಭಟನೆಗೆ ಕೇಂದ್ರ ಸರ್ಕಾರ ಮಣಿಯುವುದಿಲ್ಲ ಎಂಬ ಸಚಿವರ ಭರವಸೆ ಕರ್ನಾಟಕದ ಜನರಲ್ಲಿ ವಿಶ್ವಾಸ ಮೂಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಇದು ಕೇವಲ ಕರಾವಳಿ ಭಾಗದ ಪ್ರಶ್ನೆಯಲ್ಲ. ಮಂಗಳೂರು ರೈಲ್ವೆ ವ್ಯವಸ್ಥೆಯ ಅಭಿವೃದ್ಧಿ ಇಡೀ ಕರ್ನಾಟಕದ ಆರ್ಥಿಕ ಮತ್ತು ಸಾರಿಗೆ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರ. ಆದ್ದರಿಂದ ಕೇಂದ್ರ ಸರ್ಕಾರ ಈಗಾಗಲೇ ಕೈಗೊಂಡಿರುವ ನಿರ್ಧಾರ ಯಾವುದೇ ಕಾರಣಕ್ಕೂ ಹಿನ್ನಡೆಯಾಗಬಾರದು” ಎಂದು ಕಾಮತ್ ಹೇಳಿದ್ದಾರೆ .

ಮಂಗಳೂರು ರೈಲ್ವೆ ವ್ಯವಸ್ಥೆಯಿಂದ ಪಾಲಕ್ಕಾಡ್ ವಿಭಾಗಕ್ಕೆ ಗಣನೀಯ ಆದಾಯ ಬರುತ್ತಿದ್ದರೂ, ಮಂಗಳೂರು ರೈಲ್ವೆ ನಿಲ್ದಾಣದ ಸಮಗ್ರ ಅಭಿವೃದ್ಧಿ, ಹಳಿಗಳ ಡಬ್ಲಿಂಗ್, ಹೊಸ ರೈಲು ಸೇವೆಗಳು ಹಾಗೂ ರಾಜ್ಯದ ವಿವಿಧ ಭಾಗಗಳೊಂದಿಗೆ ಉತ್ತಮ ರೈಲು ಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಂಡುಬಂದಿಲ್ಲ. ಮೈಸೂರು ವಿಭಾಗಕ್ಕೆ ಸೇರ್ಪಡೆಯಾದ ಬಳಿಕ ಈ ಸಮಸ್ಯೆಗಳಿಗೆ ಪರಿಹಾರ ದೊರೆಯುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor