ಕುಂದಾಪುರ, ಸೆ.1: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಂದು ಖಾಸಗಿಯವರ ಕೈಯಲ್ಲಿವೆ. ಅದು ಜನಸಾಮಾನ್ಯರ ಕೈಗೆಟುಕುತ್ತಿಲ್ಲ. ಜಿಲ್ಲೆಗಳಲ್ಲಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರಗೆ ಬರುತ್ತಿದ್ದು ಡಿಗ್ರಿ ಪ್ರಮಾಣ ಪತ್ರ ಹಿಡಿದು ಮೂರುಕಾಸಿಗೆ ಕೆಲಸ ಮಾಡುತ್ತಿದ್ದಾರೆ. ಪೋಷಕರೇ ಇಂದು ವಯಸ್ಕ ಯುವಜನರನ್ನು ಸಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜಿಲ್ಲೆಯ ಯುವಜನತೆ ಧ್ವನಿ ಎತ್ತಬೇಕಾಗಿದೆ ಎಂದು ಡಿವೈಎಫ್‌ಐ ರಾಜ್ಯ ಮುಖಂಡರೂ ಹಾಗೂ ದಕ್ಷಿಣ ಕನ್ನಡ ಡಿವೈಎಫ್‌ಐ ಅಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿದ್ದಾರೆ.

ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ನಡೆದ ಡಿವೈಎಫ್‌ಐ 16ನೇ ಕುಂದಾಪುರ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಆರೋಗ್ಯ, ಶಿಕ್ಷಣ, ಉದ್ಯೋಗವನ್ನು ಈ ದೇಶದ ಬಂಡವಾಳಗಾರರ ಕೈಯಲ್ಲಿ ಇಟ್ಟಿರುವುದರಿಂದ ಭಾರತ ಜಗತ್ತಿಗೆ ವಿಶ್ವಗುರು ಆಗಿದೆ. ಇಂದು ಒಬ್ಬ ಸಾಮಾನ್ಯ ಮನುಷ್ಯ ಗಂಭೀರ ಕಾಯಿಲೆಗೊಳಗಾದರೆ ವಾಟ್ಸ್‌ಆ್ಯಪ್ ಮೂಲಕ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲ, ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರ‌ ಗಳಲ್ಲಿ ಭೂಮಿ, ಕಟ್ಟಡ ಇದೆ ಆದರೆ ಖಾಯಂ ವೈದ್ಯರೇ ಇಲ್ಲ ಎಂದ ಅವರು, ಡಿವೈಎಫ್‌ಐನಂಥ ಯುವಜನ ಸಂಘಟನೆ ಮಾತ್ರ ಈ ಸಮಸ್ಯೆಗಳಿಗೆ ಹೋರಾಟ ಮಾಡಲು ಸಾಧ್ಯ. ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ತೀವ್ರ ಹೋರಾಟ ನಡೆಸಿ ಎಂದು ಅವರು ಯುವಜನತೆಗೆ ಕರೆ ನೀಡಿದರು.

ಇಂದು ಯುವಜನತೆಯನ್ನು ಸದ್ಬಳಕೆ ಮಾಡಿಕೊಳ್ಳಲು ಆಳುವ ಸರ್ಕಾರಗಳು ಮುಂದಾಗುತ್ತಿಲ್ಲ. ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಯುವ ಪ್ರತಿಭೆಗಳಿಗೆ ಅವಕಾಶ ಇಲ್ಲ. ಯುವಜನತೆ ಇಂದು ತಮ್ಮ ಸ್ವಂತ ಶ್ರಮದಿಂದ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಾಧಕರಿಗೆ ಸನ್ಮಾನ: ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಗೈದ ಕುಂದಾಪುರದ ಡಾ.ಸತೀಶ್ ಖಾರ್ವಿ, ಸ್ಥಳೀಯ ಖ್ಯಾತ ಕ್ರಿಕೆಟಿಗ ಮನೋಜ್ ನಾಯರ್, ರಕ್ತದಾನಿ ಸುಧಾಕರ ಕಾಂಚನ್ ಅವರಿಗೆ ಸಮ್ಮೇಳನದಲ್ಲಿ ಗೌರವಿಸಲಾಯಿತು. ಗಣೇಶ್‌ದಾಸ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ನಿಸರ್ಗ ವರದಿ ಮಂಡಿಸಿದರು.

ಹೊಸ ನಾಯಕತ್ವ: ಡಿವೈಎಫ್‌ಐ ತಾಲೂಕು ಅಧ್ಯಕ್ಷರಾಗಿ ವಿಶ್ವನಾಥ್ ದಾರಿಮನೆ, ಕಾರ್ಯದರ್ಶಿಯಾಗಿ ಗಣೇಶ್ ದಾಸ್, ಕೋಶಾಧಿಕಾರಿ ಉದಯ ಟೈಲರ್ ಆಯ್ಕೆಯಾದರು.

ರಾಘವೇಂದ್ರ ದೋಣಿಮನೆ ಸ್ವಾಗತಿಸಿದರು, ಮಂಜುನಾಥ ಶೋಗನ್ ಕಾರ್ಯಕ್ರಮ ನಿರೂಪಿಸಿದರು. ರಾಜ ಬಿಟಿಆರ್ ವಂದಿಸಿದರು.

ಸಮ್ಮೇಳನದ ನಿರ್ಣಯಗಳು

ಉಡುಪಿ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹ, ಕುಂದಾಪುರ ಪುರಸಭೆ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ, ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕಗೊಳಿಸಿ ಮೇಲ್ದರ್ಜೆಗೆ ಏರಿಸಲು ಒತ್ತಾಯ, ಹೆಮ್ಮಾಡಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು, ಕುಂದಾಪುರ -ಗಂಗೊಳ್ಳಿ ಸಂಪರ್ಕ ಸೇತುವೆ ಮಾಡಲು ಒತ್ತಾಯಿಸಿ ನಿರ್ಣಯ ಮಂಡಿಸಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor