ಬಿವಿಟಿಯಲ್ಲಿ ಉದ್ಯಮಶೀಲತಾ ತರಬೇತಿಗೆ ಚಾಲನೆ
ಉಡುಪಿ, ಆ.31: ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸೀಡಾಕ್) ಉಡುಪಿ ಹಾಗೂ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಮಣಿಪಾಲ ಇವರ ಸಹಯೋಗದಲ್ಲಿ ಆಯೋಜಿಸಲಾದ 10 ದಿನಗಳ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಮಣಿಪಾಲ ಶಿವಳ್ಳಿ ಯಲ್ಲಿರುವ ಬಿವಿಟಿ ಸಭಾಂಗಣದಲ್ಲಿ ನಡೆಯಿತು.
ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿವಿಟಿ ಕಾರ್ಯ ನಿರ್ವಾಹಕ ನಿರ್ದೇಶಕ ಮೋಹನ್ ಭಾಸ್ಕರ ಹೆಗ್ಡೆ, ಉದ್ಯಮಶೀಲತೆಯ ಪಯಣದಲ್ಲಿ ಪ್ರತಿಯೊಬ್ಬರೂ ಮೂರು ಪ್ರಮುಖ ಅಂಶಗಳನ್ನು ಸದಾ ನೆನಪಿನಲ್ಲಿಟ್ಟು ಕೊಂಡು ಮುನ್ನಡೆಯಬೇಕು. ಸಂಕೋಚ ಬಿಟ್ಟು ಆತ್ಮವಿಶ್ವಾಸ ದಿಂದ ಮುನ್ನಡೆಯುವುದು, ಶುಭಾರಂಭಕ್ಕೆ ಮುಂದಾಗುವುದು ಹಾಗೂ ಸಮಾಲೋಚನೆಯ ಮೂಲಕ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವುದು ಯಶಸ್ಸಿನತ್ತ ಕೊಂಡೊಯ್ಯುವ ಪ್ರಮುಖ ಅಂಶ ಎಂದರು.
ಮುಖ್ಯ ಅತಿಥಿಗಳಾಗಿ ಜಗದೀಶ್ ಎಲಿಗಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವ ಜನತೆ ಹಾಗೂ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವವರು ಉದ್ಯಮಶೀಲತೆಯ ಕೌಶಲ್ಯಗಳನ್ನು ಬೆಳೆಸಿ ಕೊಳ್ಳುವ ಜೊತೆಗೆ ಲಭ್ಯವಿರುವ ಸರಕಾರಿ ಯೋಜನೆಗಳು, ಹಣಕಾಸು ಸೌಲಭ್ಯಗಳು ಹಾಗೂ ಮಾರುಕಟ್ಟೆ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿವಿಟಿಯ ಹಿರಿಯ ಸಲಹೆಗಾರರಾದ ಜಗದೀಶ್ ಪೈ ಹಾಗೂ ಸೀಡಾಕ್ ತರಬೇತಿದಾರ ಪೃಥ್ವಿರಾಜ್‌ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿವಿಟಿ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಸ್ವಾಗತಿಸಿದರು. ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ವಂದಿಸಿ, ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ನಿರೂಪಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ಒಟ್ಟು 25 ಮಂದಿ ಪಾಲ್ಗೊಂಡಿದ್ದರು.