ಶರಾವತಿ, ವಾರಾಹಿ ಪಂಪ್ಡ್ಸ್ಟೋರೇಜ್ ಯೋಜನೆ ರಾಜ್ಯಕ್ಕೆ ಅನಿವಾರ್ಯ: ಕೆ.ಜೆ.ಜಾರ್ಜ್ ಸಮರ್ಥನೆ
ಮರವಂತೆ, ಸೆ.7: ಈ ಬಾರಿ ಮಳೆಯ ಅಭಾವದಿಂದ ಜಲಾಶಯಗಳು ತುಂಬಿಲ್ಲ. ಇದು ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ದಿನಗಳಲ್ಲಿ ಬೇಡಿಕೆಗನುಗುಣವಾಗಿ ವಿದ್ಯುತ್ ಸರಬರಾಜು ಮಾಡಲು, ಲೋಡ್ ಶೆಡ್ಡಿಂಗ್‌ನ್ನು ತಪ್ಪಿಸಲು ಪ್ರಸ್ತಾವಿತ ಶರಾವತಿ ಹಾಗೂ ವಾರಾಹಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ ರಾಜ್ಯಕ್ಕೆ ಅನಿವಾರ್ಯ ವಾಗಿದೆ ಎಂದು ರಾಜ್ಯ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಸಮರ್ಥಿಸಿಕೊಂಡಿದ್ದಾರೆ.
ತ್ರಾಸಿ-ಮರವಂತೆ ಬೀಚ್‌ಗೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿ ಕಾಮಗಾರಿ ಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡುವ ವೇಳೆ, ಪ್ರಸ್ತಾವಿತ ವಾರಾಹಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಶರಾವತಿ ನದಿಗೆ ಅಣೆಕಟ್ಟನ್ನು ಜವಾಹರಲಾಲ್ ನೆಹರು ಕಾಲದಲ್ಲಿ ನಿರ್ಮಿಸಲಾಗುತ್ತು. ಲಾಲ್‌ಬಹಾದೂರ್ ಶಾಸ್ತ್ರಿಗಳ ಪ್ರಧಾನಿಯಾಗಿದ್ದಾಗ ಅದನ್ನು ಉದ್ಘಾಟಿಸಿದ್ದರು. ಅಂದು ಅದಕ್ಕಾಗಿ ಸಾವಿರಾರು ಎಕರೆ ಭೂಮಿ ಬಳಕೆಯಾಗಿದ್ದು, ಸಾವಿರಾರು ಮಂದಿ ಸ್ಥಳಾಂತರಗೊಂಡಿದ್ದರು. ಅಲ್ಲೀಗ 1000 ಮೆಗಾವ್ಯಾಟ್ ಉತ್ಪಾದನೆಯಾ ಗುತ್ತಿದೆ. ಅಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ ಬಂದರೆ 125 ಎಕರೆ ಭೂಮಿ ಬಳಸಿ 3000 ಮೆಗಾವ್ಯಾಟ್ ಉತ್ಪಾದನೆ ಮಾಡಲು ಸಾಧ್ಯವಿದೆ. ಇದರಲ್ಲಿ 120 ಎಕರೆ ಪೈಪ್‌ಲೈನ್‌ಗೆ ಹೋಗುತ್ತದೆ ಎಂದರು.
ಇನ್ನು ವಾರಾಹಿ ಯೋಜನೆಯಲ್ಲೂ ಕೇವಲ 40-50ಎಕರೆ ಪ್ರದೇಶ ಬಳಕೆಯಾಗುತ್ತದೆ. ಈ ಪ್ರದೇಶವನ್ನು ನಾವು, ಕುಂದಾಪುರ ಶಾಸಕರೊಂದಿಗೆ ತೆರಳಿ ಪರಿಶೀಲಿಸಿದ್ದೇವೆ. ವಾರಾಹಿ ಅಣೆಕಟ್ಟಿನಿಂದ ಬಿಟ್ಟ ನೀರನ್ನೇ ರಿಸೈಕ್ಲಿಂಗ್ ಮಾಡಿ ತೀರಾ ಕಡಿಮೆ ಖರ್ಚಿನಲ್ಲಿ ವಿದ್ಯುತ್ ಉತ್ಪಾದಿಸಲು ಸಾಧ್ಯವಿದೆ. ಮುಂದೆ ಜನರ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಇದನ್ನು ಮಾಡಲೇ ಬೇಕಾಗಿದೆ ಎಂದು ಸಮರ್ಥಿಸಿದ ಅವರು ಪರಿಸರ ಹೋರಾಟಗಾರರ ಪ್ರತಿರೋ ಧವನ್ನು ತಳ್ಳಿ ಹಾಕಿ ಜನ ಸಾಮಾನ್ಯರು ಇದನ್ನು ಬೆಂಬಲಿಸುತ್ತಿಲ್ಲ ಎಂದರು.
ಯೋಜನೆಗಳು ಇಂದು ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದಾಗ, ಶರಾವತಿ ಯೋಜನಗೆ ಕುರಿತಂತೆ ರಾಜ್ಯ ಸರಕಾರದ ಪರಿಸರ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಒಪ್ಪಿಗೆಯೊಂದಿಗೆ ಕೇಂದ್ರ ಸರಕಾರಕ್ಕೆ ಕಳುಹಿಸಿದೆ. ಕೇಂದ್ರ ಸರಕಾರ ಅಧ್ಯಯನ ತಂಡವೊಂದನ್ನು ಕಳುಹಿಸಿದ್ದು ವರದಿಯನ್ನು ನಿರೀಕ್ಷಿಸಲಾಗಿದೆ. ಶೀಘ್ರವೇ ಕೇಂದ್ರದ ಅನುಮತಿ ದೊರೆಯುವ ನಿರೀಕ್ಷೆ ಇದೆ ಎಂದರು.
ಶರಾವತಿ ಯೋಜನೆ ತಿರಸ್ಕೃತವಾಗಿದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು, ಅದು ಕೇಂದ್ರದಲ್ಲಿ ಪರಿಶೀಲನೆಯ ಹಂತ ದಲ್ಲಿದೆ. ಶೀಘ್ರವೇ ಅನುಮೋದನೆ ಪಡೆಯುವ ವಿಶ್ವಾಸದಲ್ಲಿದ್ದೇವೆ. ವಾರಾಹಿ ಯೋಜನೆಯ ಡಿಪಿಆರ್ ಸಿದ್ಧವಾಗು ತಿದ್ದು, ಬಳಿಕ ಅದನ್ನು ರಾಜ್ಯದ ವಿವಿಧ ಇಲಾಖೆಗಳ ಅನುಮೋದನೆಗೆ ಕಳುಹಿಸಲಾಗುವುದು. ಡಿಪಿಆರ್ ಸಿದ್ಧಗೊಂಡ ಬಳಿಕ ಯೋಜನೆಯ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದರು.
ಸಿದ್ಧರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ನೀಡಿರುವ ಹೇಳಿಕೆಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. ಅದನ್ನು ಪ್ರದೀಪ್ ಈಶ್ವರ್ ಬಳಿಯೇ ಕೇಳಿ ಎಂದರು.
ಸಿದ್ಧರಾಮಯ್ಯ ಮತ್ತೆ ಸಿಎಂ ಆಗುತ್ತಾರಾ ಎಂದು ಕೇಳಿದಾಗ, ಅದನ್ನು ಸಿದ್ಧರಾಮಯ್ಯ ಹಾಗೂ ಹೈಕಮಾಂಡ್ ನಿರ್ಧರಿಸಬೇಕು. ನಾನು ಅದನ್ನು ಹೇಗೆ ಹೇಳಲಿ ಎಂದು ಮರು ಪ್ರಶ್ನಿಸಿದರು.