ವಂದೇ ಮಾತರಂ ಜನಜಾಗೃತಿಗಾಗಿ 18ಕಿ.ಮೀ. ಕಾಲ್ನಡಿಗೆ ಜಾಥಾ
ಕುಂದಾಪುರ, ಸೆ.7: ನಮ್ಮ ತಾಯ್ನಾಡಿನ ಮೇಲಿನ ಪ್ರೀತಿ, ಗೌರವ ಮತ್ತು ದೇಶಭಕ್ತಿಯ ಪ್ರತೀಕವಾಗಿರುವ ವಂದೇ ಮಾತರಂ’ ಕೇವಲ ಒಂದು ಘೋಷ ವಾಕ್ಯವಾಗಿರದೆ ನಮ್ಮ ದೇಶದ ಆತ್ಮವಾಗಿದೆ. ಈ ಪಾದಯಾತ್ರೆಯ ಮೂಲಕ ವಂದೇ ಮಾತರಂ’ ಅರ್ಥ ಮತ್ತು ಅದರ ಹಿಂದಿರುವ ದೇಶಪ್ರೇಮದ ಸಂದೇಶ ಇನ್ನಷ್ಟು ಜನರಿಗೆ ತಲುಪಿಸುವಂತೆ ಮಾಡಬೇಕು ಎಂದು ಕೇರಳದ ರಾಜ್ಯಸಭಾ ಸದಸ್ಯ ಸದಾನಂದ ಮಾಸ್ಟರ್ ಹೇಳಿದ್ದಾರೆ.
ವಂದೇ ಮಾತರಂ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೋಮವಾರ ಕುಂದಾಪುರದಿಂದ ಸಾಸ್ತಾನದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ 18 ಕಿ.ಮೀ. ದೂರದವರೆಗೆ ಹಮ್ಮಿಕೊಳ್ಳಲಾದ ಕಾಲ್ನಡಿಗೆ ಜಾಥಾಕ್ಕೆ ಕುಂದಾಪುರ ಹೊಸ ಬಸ್ ನಿಲ್ದಾಣ ಬಳಿ ಚಾಲನೆ ನೀಡಿ, ಬಳಿಕ ಶಾಸ್ತ್ರಿ ಸರ್ಕಲ್ ಬಳಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಈ ಪಾದಯಾತ್ರೆ ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುವುದಲ್ಲ. ಇದು ವಿಕಸಿತ ಭಾರತ’ದ ಸಂಕಲ್ಪದೊಂದಿಗೆ ಪಯಣಿಸುತ್ತೇವೆ. ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ರೂಪಿಸುವುದು ಪ್ರಧಾನಿ ಮೋದಿಯವರ ಮಾತ್ರವಲ್ಲ, ನಮ್ಮೆಲ್ಲರ ಕನಸು. ವಿಕಸಿತ ಭಾರತ’ದ ಮಹತ್ವದ ಗುರಿ ಸಾಕಾರ ಜವಾಬ್ದಾರಿ ನಮ್ಮೆಲ್ಲರದು ಎಂದು ಅವರು ತಿಳಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದ 224 ಕ್ಷೇತ್ರಗಳ ಪೈಕಿ ಕುಂದಾಪುರದಲ್ಲೇ ಮೊದಲ ಜಾಥಾ ನಡೆಯುತ್ತಿರುವುದು ವಿಶೇಷ. ಈ ಸಂದಿಗ್ಧತೆ ಯಾಕೆ? ದೇಶದ ಸ್ವಾತಂತ್ರ್ಯಕ್ಕೆ ಸ್ಫೂರ್ತಿ, ಶಕ್ತಿ ಕೊಟ್ಟ ವಂದೇ ಮಾತರಂ ಬಗ್ಗೆ ವಿರೋಧ ಯಾಕೆ? ಇದು ರಾಷ್ಟ್ರಕ್ಕಾಗಿ ಹೆಜ್ಜೆ ಹಾಕುತ್ತಿದ್ದೇವೆ. ಆದರೆ ವಂದೇ ಮಾತರಂ ವಿಚಾರದಲ್ಲಿ ರಾಜಕಾರಣ ತರ ಬಾರದು. ಇದನ್ನು ಧಿಕ್ಕರಿಸಿದರೆ ಖಂಡಿತ ನಮ್ಮ ವಿರೋಧವಿದೆ ಎಂದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ನಿವೃತ್ತ ಹಿರಿಯ ಯೋಧ ರಮೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಕುಮಾರ್ ಶೆಟ್ಟಿ, ವಿವಿಧ ಮಂಡಲಗಳ ಅಧ್ಯಕ್ಷ ರಾದ ಅನಿತಾ, ನವೀನ್ ನಾಯಕ್, ರಾಜು ಕುಲಾಲ್, ಗೋಪಾಲ್, ಪ್ರಮುಖರಾದ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ರಾಜೇಶ್ ಕಾವೇರಿ, ಶಂಕರ ಅಂಕದಕಟ್ಟೆ, ಸುನೀಲ್ ಶೆಟ್ಟಿ, ಸುರೇಶ್ ಶೆಟ್ಟಿ ಕಾಡೂರು, ಸದಾನಂದ ಬಳ್ಕೂರು, ವಿಠ್ಠಲ ಪೂಜಾರಿ, ಸೌರಭಿ ಪೈ, ರೂಪಾ ಪೈ ಉಪಸ್ಥಿತರಿದ್ದರು.
ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ನಿರೂಪಿಸಿ, ಸುಧೀರ್ ಕೆ.ಎಸ್. ವಂದಿಸಿದರು.