ಉಡುಪಿ, ಸೆ.12: ಪ್ರಜಾಸೇವಾ ಆಂದೋಲನ ಇದು ರಾಜ್ಯ ಸರಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮ. ಜನ ಸೇವೆಯೇ ಪರಮಧರ್ಮ. ಅಧಿಕಾರ ಎಂಬುದು ಜನರ ಸೇವೆ ಮಾಡಲು ದೊರಕುವ ಅಪೂರ್ವ ಅವಕಾಶವಾಗಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾ ಸೇವೆ ಇಲಾಖೆ ತಾಲೂಕು ಆಡಳಿತ ಕಾಪು ಸಹಯೋಗದಲ್ಲಿ ಇಂದು ಕಾಪು ಹೋಬಳಿಯ ಮಜೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ. ಧನಾತ್ಮಕ ಚಿಂತನೆಯಿಂದ ಜನರ ಒಳಿತಿಗಾಗಿ ಕೆಲಸ ಮಾಡಬೇಕು. ಕಡು ಕಷ್ಟದಲ್ಲಿರುವ ಜನರು ಅಹವಾಲು ತೆಗೆದುಕೊಂಡು ಬಂದಾಗ ಅವರನ್ನು ಹೆಚ್ಚು ಅಲೆದಾಡಿಸದೆ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಕೊಡಬೇಕು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದಾಗ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದರು.
ತಾಲೂಕಿನ ಪ್ರಥಮ ಪ್ರಜಾ ಸೇವೆ ಸಭೆ ಇದಾಗಿದ್ದು ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಸಂಘಟಿಸಿದ್ದಕ್ಕಾಗಿ ತಾಲೂಕು ಆಡಳಿತವನ್ನು ಪ್ರಶಂಶಿಸಿದ ಅವರು ಅಧಿಕಾರಿಗಳಿಗೆ ಯಾವುದೇ ರೀತಿ ತೊಂದರೆಯಾದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಜಾ ಸೇವಾ ಆಂದೋಲನ ಸಭೆಗಳನ್ನು 1ನೇ ಮತ್ತು 3ನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ 2ನೇ ಮತ್ತು 4ನೇ ಶನಿವಾರ ಶಾಸಕರ ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗುವುದು ಎಂದು ವಿವರಿಸಿದರು.
ಈ ಸಭೆಗಳಲ್ಲಿ ಸಾರ್ವಜನಿಕರ ಅಹವಾಲು ಮತ್ತು ಕುಂದು ಕೊರತೆಗಳಿಗೆ ತ್ವರಿತ ಮತ್ತು ಗುಣಾತ್ಮಕ ಸ್ಪಂದನೆ ದೊರೆತು ಅದೇ ದಿನ ಪರಿಹಾರ ಒದಗಿಸಲು ಪ್ರಯತ್ನಿಸಲಾಗುತ್ತದೆ. ತಪ್ಪಿದಲ್ಲಿ 21 ದಿನಗಳ ಒಳಗಾಗಿ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತದೆ. ಸಾರ್ವಜನಿಕರು ಪ್ರಜಾಸೇವೆ ಸಭೆಗಳಲ್ಲಿ, ಗ್ರಾಮ ವನ್, ಕರ್ನಾಟಕ ವನ್ ಕೇಂದ್ರಗಳಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಸಾರ್ವಜನಿಕರಿಂದ ಸ್ವೀಕರಿಸಲಾದ ಅರ್ಜಿಗಳನ್ನು ಪ್ರತಿ ಬುಧವಾರ ಪರಿಶೀಲಿಸಿ, ಶೀಘ್ರವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಸೇವೆಯೇ ಧರ್ಮ ಅನ್ನುವ ಮನೋಭಾವದಿಂದ ಕೆಲಸ ಮಾಡಿ ಜನರ ಸಮಸ್ಯೆಗೆ ಸ್ಪಂದಿಸೋಣ ಎಂದು ಅಧಿಕಾರಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯಕ್, ಕಾಪು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾಪು ಪುರಸಭೆ ಅಧ್ಯಕ್ಷೆ ಮೋಹಿನಿ ಶೆಟ್ಟಿ, ತಹಶೀಲ್ದಾರ್ ಅನಂತ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಇಂದು ನಡೆದ ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 76 ಅರ್ಜಿಗಳು ಸಲ್ಲಿಕೆಯಾದವು. ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್ ಸ್ವಾಗತಿಸಿ, ಕಾಪು ಪುರಸಭೆ ಮುಖ್ಯ ಅಧಿಕಾರಿ ನೀಲಕಂಠ ಮೇಸ್ತ ವಂದಿಸಿದರು. ಪಡು ಕಾಪು ಗ್ರಾಮ ಆಡಳಿತ ಅಧಿಕಾರಿ ಶ್ರೀನಿವಾಸ ಆರ್.ಟಿ. ನಿರೂಪಿಸಿದರು.