ತುಳು ಭಾಷೆಗೆ ಮಾನ್ಯತೆ ದೊರೆಯಲಿ: ತುಳುನಾಡ ರಕ್ಷಣಾ ವೇದಿಕೆ
ಉಡುಪಿ, ಸೆ.17: ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲೇ ತುಳು ಭಾಷೆಗೆ ಕರ್ನಾಟಕದ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡುವ ಕುರಿತು ಐತಿಹಾಸಿಕ ನಿರ್ಧಾರ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಫ್ರಾಂಕಿ ಡಿಸೋಜ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಸಭೆ ತುಳುನಾಡಿನ ಜನರಿಗೆ ಸಾಮಾನ್ಯ ಅಡಳಿತಾತ್ಮಕ ಸಭೆಯಲ್ಲ. ಹಲವು ವರ್ಷಗಳಿಂದ ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ನಡೆಯು ತ್ತಿರುವ ಹೋರಾಟಕ್ಕೆ ಸ್ಪಷ್ಟ ದಿಕ್ಕು ನೀಡಬಹುದಾದ ಮಹತ್ವದ ವೇದಿಕೆಯಾಗಿದೆ ಎಂದರು.
ತುಳು ಭಾಷೆಗೆ ಕರ್ನಾಟಕದ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡುವ ನಿರ್ಧಾರ ಕೈಗೊಳ್ಳಬೇಕು. ಸರಕಾರಿ ಕಚೇರಿಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ತುಳು ಬಳಕೆಗೆ ಅವಕಾಶ ಕಲ್ಪಿಸಬೇಕು. ತುಳು ಶಿಕ್ಷಣ, ಸಾಹಿತ್ಯ, ಸಂಶೋಧನೆ, ಅನುವಾದ ಮತ್ತು ಡಿಜೆಟಲ್ ಅಭಿವೃದ್ಧಿಗೆ ವಿಶೇಷ ಪ್ರೋತ್ಸಾಹ ನೀಡಬೇಕು. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲು ಕೇಂದ್ರ ಸರಕಾರಕ್ಕೆ ರಾಜ್ಯದಿಂದ ಪರಿಣಾಮಕಾರಿ ಶಿಫಾರಸ್ಸು ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ತುಳು ಭಾಷೆಯ ವಿಚಾರವನ್ನು ನಿರ್ಲಕ್ಷಿಸಿದರೆ, ತುಳುನಾಡಿನ ಜನರ ಭಾವನೆಗಳಿಗೆ ನ್ಯಾಯ ದೊರಕಿದಂತಾ ಗುವುದಿಲ್ಲ. ಈ ಬಾರಿ ಮನವಿ ಸ್ವೀಕರಿಸುವುದು ಅಥವಾ ಭರವಸೆ ನೀಡುವುದು ಸಾಕಾಗುವುದಿಲ್ಲ. ತುಳು ಕೇವಲ ಭಾಷೆಯಲ್ಲ, ತುಳುನಾಡಿನ ಅಸ್ಮಿತೆ ತುಳು. ತುಳು ಎಂದರೆ ಕೇವಲ ಸಂವಹನದ ಭಾಷೆಯಲ್ಲ. ಹಲವು ಸಾಂಸ್ಕೃತಿಕ ಪರಂಪರೆಗಳ ಜೀವನಾಡಿ ಯಾಗಿದೆ. ಈ ಬಾರಿ ಸರಕಾರ ಖಂಡಿತ ತಮ್ಮ ಬಹುಕಾಲದ ಬೇಡಿಕೆ ಈಡೇರಿಸುವ ಭರವಸೆ ಹೊಂದಿದ್ದೇವೆ. ಒಂದು ವೇಳೆ ಸರಕಾರ ಮತ್ತೆ ನೆಪ ಹೇಳುತ್ತಾ ಕೂತರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಮುಖಂಡರಾದ ಸುರೇಂದ್ರ ಪೂಜಾರಿ, ನಾಗಲಕ್ಷ್ಮಿ, ಜಯ ಪೂಜಾರಿ, ನಿತಿನ್ ಕುಮಾರ್ ಶೆಟ್ಟಿ, ಶರತ್ ರಾಜ್ ಆರೂರು, ಅನುಸೂಯಾ ಶೆಟ್ಟಿ, ಕೃಷ್ಣಾನಂದ ನಾಯಕ್, ಗುಣಾಕಾರ್ ಹಾಲಕ್ಕಿ, ಕೃಷ್ಣ ಮಾರ್ಪಳ್ಳಿ, ಪವಿತ್ರ ಆಚಾರ್ಯ, ವನಿತಾ ಆಚಾರ್ಯ, ಮಂಜುಳ, ಉದಯ ಮೊದಲಾದವರು ಉಪಸ್ಥಿತರಿದ್ದರು.