ಸಾಯಿ ಸಂಜಯ್ ಬಿಂಗಾರೆ

ಮಣಿಪಾಲ: 10 ತಿಂಗಳ ಹಿಂದೆ ನಡೆದ ಮಣಿಪಾಲದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಿರುಕುಳ ನೀಡಿದ ಆರೋಪದಡಿ ಓರ್ವ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ದೀಯು ದಮನ್ ಕೇಂದ್ರಾಡಳಿತ ಪ್ರದೇಶದ ಸಾಯಿ ಸಂಜಯ್ ಬಿಂಗಾರೆ (21) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಮಣಿಪಾಲದ ಹೊಟೇಲ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಸ್ಸಾಂ ರಾಜ್ಯದ ಲೆಸ್ಲಿ ಜೋಸೆಫ್ ಮ್ಯಾಥ್ಯೂ ಎಂಬವರ ಮಗಳು ಪೌಲಾ ಲೆಸ್ಲಿ ವಾಜ್ರಿರ್ ಎಂಬಾಕೆ 2025ರ ನ.7ರಂದು ರಾತ್ರಿ ಮಣಿಪಾಲದ ಕಾಯಿನ್ ಸರ್ಕಲ್ ಬಳಿಯ ತನ್ನ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ತನಿಖೆ ನಡೆಸಿ ಅಂತಿಮ ವರದಿ ತಯಾರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದು, ನಂತರ ವಶಪಡಿಸಿಕೊಳ್ಳಲಾದ ಮೃತರ ಫೋನ್, ಡೈರಿ, ಡಿಜಿಟಲ್ ದಾಖಲೆಗಳನ್ನು ಲೆಸ್ಲಿ ಜೋಸೆಫ್ ಮ್ಯಾಥ್ಯೂ ಅವರ ವಶಕ್ಕೆ ನೀಡಲಾಗಿತ್ತು. ಲೆಸ್ಲಿ ಜೋಸೆಫ್ ಮ್ಯಾಥ್ಯೂ ತನ್ನ ಮಗಳ ಫೋನ್, ಡೈರಿಗಳನ್ನು ಪರಿಶೀಲಿಸಿದಾಗ ಸಾಯಿ ಸಂಜಯ್ ಬಿಂಗಾರೆ ಸ್ನ್ಯಾಪ್ ಚಾಟ್ ಮೂಲಕ ವಿನಿಮಯ ಮಾಡಿಕೊಂಡ ದಾಖಲೆಗಳು ದೊರೆತಿದ್ದವು.

ಪೌಲಾ ಲೆಸ್ಲಿ ವಾಜ್ರಿರ್‌ನನ್ನು ಆರೋಪಿ ಸಾಯಿ ಸಂಜಯ್ ಬಿಂಗಾರೆ ಆತ್ಮಹತ್ಯೆಗೆ ನಿರಂತರ ಕಿರುಕುಳ, ಬಲವಂತ ಅಥವಾ ಬ್ಲ್ಯಾಕ್‌ಮೇಲ್ ಮಾಡಿರುವ ಸಾಧ್ಯತೆ ಇರುವುದರಿಂದ ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಂದೆ ದೂರಿನಲ್ಲಿ ತಿಳಿಸಿದ್ದು, ಅದರಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಸೂಚನೆಯಂತೆ ಮಣಿಪಾಲ ಠಾಣಾ ಎಸ್ಸೈ ತಿಮ್ಮೇಶ್ ಬಿ.ಎನ್. ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿಯನ್ನು ಸೆ.9ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor