ಉಡುಪಿ, ಸೆ.16: ಸಹಕಾರ ಸಂಘಗಳು ದೇಶದ ಆರ್ಥಿಕತೆಗೆ ಉತ್ತೇಜನ ನೀಡುತ್ತವೆ. ಸಮುದಾಯದ ಕಟ್ಟ ಕಡೆಯ ಜನಕ್ಕೂ ಆರ್ಥಿಕ ಶಕ್ತಿ ನೀಡಿ ಅವರ ವ್ಯಾಪಾರಕ್ಕೆ ಉತ್ತೇಜನ ನೀಡುವ ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ಚೈತನ್ಯ ನೀಡುತ್ತವೆ. ಸರಕಾರದ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಗಳ ಬೆನ್ನಿಗೆ ಸರಕಾರ ಸದಾ ನಿಲ್ಲಲಿದೆ ಎಂದು ರಾಜ್ಯ ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೆ. ಎಸ್. ಬಸವಂತಪ್ಪ ಹೇಳಿದ್ದಾರೆ.

ಉದ್ಯಾವರ ಪಿತ್ರೋಡಿಯ ಮೀನುಗಾರಿಕೆ ಮತ್ತು ಮೀನು ಉತ್ಪನ್ನ ಸಾಮಗ್ರಿಗಳ ಸಹಕಾರ ಸಂಘದ ಮಲ್ಪೆ ಶಾಖೆಯಲ್ಲಿ ನೂತನವಾಗಿ ನವೀಕರಣಗೊಂಡ ಡೀಸೆಲ್ ಬಂಕ್ ಕಟ್ಟಡ ಉದ್ಘಾಟನೆ ನೆರವೇರಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಸಹಕಾರ ಸಂಘಗಳಲ್ಲಿ ಬರುವ ಲಾಭದ ಅಂಶವನ್ನು ಸಂಘದ ಸದಸ್ಯರ ಮಕ್ಕಳ ಉನ್ನತ ವ್ಯಾಸಂಗಕ್ಕೆ ವಿನಿಯೋಗಿಸಿ ಕಡು ಬಡವರಿಗೆ ಪ್ರಯೋಜನ ವಾಗುವಂತೆ ನೋಡಿಕೊಳ್ಳಬೇಕು. ಜನರ ಆರ್ಥಿಕತೆಯ ಬೆನ್ನೆಲುಬಾದ ಸಹಕಾರ ಸಂಘ ಹೆಮ್ಮರವಾಗಿ ಬೆಳೆದು ಇನ್ನು ಹೆಚ್ಚಿನ ಅಭಿವೃದ್ಧಿ ಕಾಣಲಿ ಎಂದರು.

ಮಲ್ಪೆ ಬಂದರಿನ ಅವ್ಯವಸ್ಥೆಯನ್ನು ಖುದ್ದಾಗಿ ಕಂಡು ಬಂದಿದ್ದೇನೆ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬಂದರಿನ ಸ್ವಚ್ಛತೆ ಆಧುನಿಕರಣ ಮೂಲಸೌಕರ್ಯ ಬಗ್ಗೆ ಮುಂದಿನ ದಿನಗಳಲ್ಲಿ ಗಮನಹರಿಸಿ ಈ ಬಗ್ಗೆ ಚರ್ಚೆ ನಡೆಸಿ ಯೋಜನೆಗಳನ್ನ ಹಂತ ಹಂತವಾಗಿ ಜಾರಿ ಮಾಡಲಾಗುವುದು ಎಂದರು.

ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಯಾರೂ ಮನೆಯಿಂದ ಹೊರಗೆ ಕಾಲಿಡಿದ ಕಾಲದಲ್ಲಿ ಮೀನುಗಾರ ಮಹಿಳೆಯರು ಬುಟ್ಟಿಯಲ್ಲಿ ಮೀನು ಹಿಡಿದುಕೊಂಡು ಮನೆಮನೆಗೆ ತೆರಳಿ ಮೀನು ಮಾರಾಟ ಮಾಡಿ ಮನೆಯ ಅರ್ಥ ವ್ಯವಸ್ಥೆಗೆ ಬಲ ತುಂಬಿದ್ದಾರೆ. ಮೀನುಗಾರಿಕೆ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹಳಷ್ಟಿದೆ. ಮೀನುಗಾರರಿಗೆ ನೀಡುವ ಸಂಕಷ್ಟ ಪರಿಹಾರ ನಿಧಿಯನ್ನು ಕಲ್ಯಾಣ ನಿಧಿ ಎಂದು ಬದಲಾಯಿಸಿ ಹೆಚ್ಚಿನ ಅನುದಾನ ದೊರಕುವಂತೆ ಮಾಡಬೇಕು. ಕರಾವಳಿಯಲ್ಲಿ ಒಂದು ಸೀ ಫುಡ್ ಪಾರ್ಕ್ ಆಗಬೇಕು. ಇದರಿಂದ ಕರಾವಳಿ ಭಾಗದಲ್ಲಿ ಉದ್ಯೋಗಾವಕಾಶ ಹೆಚ್ಚಲಿದೆ ಎಂದರು.

ಈ ಸಂದರ್ಭದಲ್ಲಿ ಸಹಕಾರ ಸಂಘದ ಸದಸ್ಯರು ಹಾಗೂ ಮೀನುಗಾರ ಮುಖಂಡರು ಹಲವು ಬೇಡಿಕೆಗಳನ್ನು ಮುಂದಿಟ್ಟು ಸಚಿವರಿಗೆ ಮನವಿ ಸಲ್ಲಿಸಿದರು.

ಮೀನುಗಾರಿಕೆ ಮತ್ತು ಮೀನು ಉತ್ಪನ್ನ ಸಾಮಗ್ರಿಗಳ ಸಹಕಾರ ಸಂಘದ ಅಧ್ಯಕ್ಷ ಗಿರೀಶ್ ವಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ನಾಯಕರಾದ ವಿನಯಕುಮಾರ ಸೊರಕೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಸಾದ್‌ರಾಜ್ ಕಾಂಚನ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರಾ, ಪಿತ್ರೋಡಿ ಹದಿನಾಲ್ಕು ಪಟ್ನ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೇಶವ ಎಂ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಗಿರೀಶ್ ಸುವರ್ಣಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor