ಉಡುಪಿ, ಸೆ.24: ಮಣಿಪಾಲದ ಮಾಹೆ ವತಿಯಿಂದ ವರ್ಲ್ಡ್ ಮರಿಟೈಮ್ ಡೇ ಪ್ರಯುಕ್ತ ಕರಾವಳಿ ಕಾವಲು ಪೊಲೀಸ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗೆ ಹಮ್ಮಿಕೊಳ್ಳಲಾದ ಜಲರಕ್ಷಣೆ ಮತ್ತು ಪುನರುಜ್ಜಿವನ ಪ್ರಮಾಣಪತ್ರ ಕೋರ್ಸ್‌ನ ಸಮಾರೋಪ ಸಮಾರಂಭವು ಸೆ.24ರಂದು ಮಣಿಪಾಲದ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನ ಸಭಾಂಗಣ ದಲ್ಲಿ ನಡೆಯಿತು.

ಕರಾವಳಿ ಕಾವಲು ಪೊಲೀಸ್ ಘಟಕದ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮಾತನಾಡಿ, ಸಮುದ್ರ ತೀರದಲ್ಲಿ ಮತ್ತು ಸಮುದ್ರದಲ್ಲಿ ಕರ್ತವ್ಯ ನಿರ್ವಹಿಸುವ ಕರಾವಳಿ ಕಾವಲು ಪೊಲೀಸ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಿರುವ ತರಬೇತಿಯು ಅತ್ಯಂತ ಉಪಯುಕ್ತವಾಗಿದ್ದು, ಈ ತರಬೇತಿ ಸಿಬ್ಬಂದಿಯವರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಸಹಾಯ ವಾಗುತ್ತದೆ. ಮುಂದೆಯೂ ಪೊಲೀಸ್ ಇಲಾಖೆಯ ಕರ್ತವ್ಯ ನಿರ್ವಹಣೆಯಲ್ಲಿ ಮಾಹೆಯವರ ಸಹಕಾರವು ನಿರೀಕ್ಷಿಸುತ್ತೇವೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಮಣಿಪಾಲ ಮಾಹೆ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಪೊಲೀಸ್ ಇಲಾಖೆ ಮತ್ತು ಮಣಿಪಾಲ ಮಾಹೆ ಸಂಸ್ಥೆಯವರು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆಯು ಸದಾ ಮಾಹೆಗೆ ಸಹಕಾರ ನೀಡುತ್ತಿದ್ದು, ಮಾಹೆ ಸಂಸ್ಥೆಗಳು ಕೂಡ ಪೊಲೀಸ್ ಇಲಾಖೆಯ ಕಾರ್ಯ ಚಟುವಟಿಕೆಗೆ ಸಹಕಾರವನ್ನು ನೀಡಲು ಬದ್ದವಾಗಿದೆ. ಈ ತರಬೇತಿಯು ಜನರ ಜೀವರಕ್ಷಣೆ ಮಾಡಲು ಪೊಲೀಸ್ ಇಲಾಖೆಗೆ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು.

ಮಣಿಪಾಲ ಮಾಹೆಯ ಚೀಪ್ ಅಪರೇಟಿಂಗ್ ಆಫೀಸರ್ ಡಾ.ಆನಂದ ವೇಣುಗೋಪಾಲ, ಕೆಎಂಸಿ ಮಣಿಪಾಲ ಡೀನ್ ಡಾ.ಅನಿಲ್ ಕೆ.ಭಟ್, ಎರ್ಮಜೆನ್ಸಿ ಮೆಡಿಸಿನ್ ವಿಭಾಗದ ಅಸೋಸಿಯೇಟ್ ಪ್ರೋಪೆಷರ್ ಡಾ.ಪ್ರಾಸ್ಟನ್ ಮರೆ ಸಿರೂರು ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮದಲ್ಲಿ ತರಬೇತಿ ಪಡೆದ 42 ಸಿಬ್ಬಂದಿಗಳಿಗೆ ಮಣಿಪಾಲ ಮಾಹೆ ವತಿಯಿಂದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಉಪನ್ಯಾಸಕಿ ಶ್ವೇತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor