ಉಡುಪಿ, ಅ.1: ಮನೆಯಲ್ಲಿ ಬಳಸಿದ ಅಥವಾ ಬಳಕೆಯಾಗದ ಉತ್ತಮ ಗುಣಮಟ್ಟದಲ್ಲಿರುವ ಪಾದರಕ್ಷೆಗಳನ್ನು ಹೊಸ ಪಾದರಕ್ಷೆಗಳಾಗಿ ಪರಿವರ್ತಿಸುವ ಮೂಲಕ ಬಡ ಮಕ್ಕಳಿಗೆ ಕೊಡುಗೆಯಾಗಿ ನೀಡುವ ಉದ್ದೇಶದಿಂದ ಮರು ವರ್ಷಗಳ ಹಿಂದೆ ಹಮ್ಮಿಕೊಂಡ ‘ನಡಿಗೆ’ ಸಾಮಾಜಿಕ ಅಭಿಯಾನವನ್ನು ಅ.23, 24ಮತ್ತು 25ರಂದು ಮತ್ತೊಮ್ಮೆ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಈ ವಿನೂತನ ಕಾರ್ಯಕ್ರಮದ ಆಯೋಜಕ ಅವಿನಾಶ್ ಕಾಮತ್ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಈ ಅಭಿಯಾನ ನಡೆಯಲಿದ್ದು, ಇಲ್ಲಿ ಬಳಕೆ ಯಾಗದೇ ಉಳಿದಿರುವ ಉತ್ತಮ ಸ್ಥಿತಿಯಲ್ಲಿರುವ ಪಾದರಕ್ಷೆಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಅವುಗಳನ್ನು ಮುಂಬಯಿಯ ‘ಗ್ರೀನ್‌ಸೋಲ್ ಫೌಂಡೇಷನ್’ಗೆ ಕಳುಹಿಸಲಾಗುತ್ತದೆ. ಅಲ್ಲಿ ಅವುಗಳನ್ನು ಅಪ್‌ಸೈಕ್ಲಿಂಗ್ (ಹೊಸ ಬಳಕೆಗೆ ರೂಪಾಂತರ) ಪ್ರಕ್ರಿಯೆ ಮೂಲಕ ಮರುಬಳಕೆಗೆ ಸಿದ್ಧಪಡಿಸಿ ದೇಶಾದ್ಯಂತ ಅಗತ್ಯವಿರುವವರಿಗೆ ರವಾನಿಸಲಾಗುತ್ತದೆ ಎಂದರು.

ಸಾರ್ವಜನಿಕರು ತಾವು ಬಳಸಿದ ಉತ್ತಮ ಗುಣಮಟ್ಟದ ಶೂ, ಸ್ಲಿಪರ್, ರಬ್ಬರ್ ಶೂ ಹಾಗೂ ಚಪ್ಪಲಿಗಳನ್ನು ದಾನ ವಾಗಿ ನೀಡಬಹುದು. ಆದರೆ ಹೀಲ್ಸ್ ಹಾಗೂ 10 ವರ್ಷದೊಳಗಿನ ಮಕ್ಕಳ ಪಾದರಕ್ಷೆಗಳನ್ನು ಸ್ವೀಕರಿಸಲಾ ಗುವುದಿಲ್ಲ. ದಾನ ನೀಡಲು ಇಚ್ಛಿಸುವವರು ಅ.23ರಿಂದ 25ರವರೆಗೆ ಎಂಜಿಎಂ ಕಾಲೇಜಿಗೆ ಪಾದರಕ್ಷೆಗಳನ್ನು ತಂದು ನೀಡಬಹುದು ಎಂದು ಅವಿನಾಶ್ ಕಾಮತ್ ತಿಳಿಸಿದರು.

2023ರಲ್ಲಿ ನಡೆದ ಮೊದಲ ‘ನಡಿಗೆ’ ಅಭಿಯಾನದಲ್ಲಿ 5ರಿಂದ 6 ಸಾವಿರ ಪಾದರಕ್ಷೆ ಸಂಗ್ರಹಿಸುವ ಗುರಿ ಹೊಂದಲಾ ಗಿತ್ತು. ಆದರೆ ಉಡುಪಿಯ ಜನರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆತು ಸುಮಾರು 18 ಸಾವಿರ ಪಾದರಕ್ಷೆಗಳನ್ನು ಸಂಗ್ರಹಿಸಲಾಗಿತ್ತು. ಈ ಪ್ರಯತ್ನವನ್ನು ಗುರುತಿಸಿದ ಗ್ರೀನ್‌ಸೋಲ್ ಫೌಂಡೇಶನ್, ದೇಶದಲ್ಲೇ ಈ ಮಾದರಿಯ ಅಭಿಯಾನ ಮೊದಲ ಬಾರಿಗೆ ನಡೆದಿರುವುದಾಗಿ ಪ್ರಮಾಣಪತ್ರ ನೀಡಿ ಗೌರವಿಸಿತ್ತು ಎಂದು ಹಮ್ಮೆಯಿಂದ ತಿಳಿಸಿದರು.

ಇಲ್ಲಿ ಸಂಗ್ರಹವಾದ ಎಲ್ಲಾ ಪಾದರಕ್ಷೆಗಳನ್ನು ಮುಂಬೈ ಮೂಲದ ಗ್ರೀನ್‌ಸೋಲ್ ಸಂಸ್ಥೆಗೆ ಕಚ್ಚಾ ವಸ್ತುವಿನ ರೂಪದಲ್ಲಿ ನೀಡಲಾಗುವುದು. ಸಂಸ್ಥೆಯು ಅವುಗಳನ್ನು ಮರುಬಳಕೆ ಮಾಡಿ ಹೊಸ ಪಾದರಕ್ಷೆಗಳನ್ನು ತಯಾರಿಸಿ ದೇಶದಾದ್ಯಂತ ಪಾದರಕ್ಷೆಗಳಿಲ್ಲದ ಹಾಗೂ ಅಶಕ್ತರಿಗೆ ಉಚಿತವಾಗಿ ವಿತರಿಸುತ್ತದೆ. ಪರಿಸರ ಸ್ನೇಹಿ ಈ ಕಾರ್ಯ ವನ್ನು ಗ್ರೀನ್‌ಸೋಲ್ ಸಂಸ್ಥೆ 2016ರಿಂದ ನಡೆಸಿಕೊಂಡು ಬರುತ್ತಿದೆ ಎಂದು ವಿವರಿಸಿದರು.

ಅ.23ರಿಂದ ನಡೆಯುವ ಈ ಬಾರಿಯ ಅಭಿಯಾನದಲ್ಲಿ ಗ್ರೀನ್‌ಸೋಲ್ ಫೌಂಡೇಶನ್‌ನ ಸಂಸ್ಥಾಪಕರಾದ ರಮೇಶ್ ಧಾಮಿ ಮತ್ತು ಶ್ರೀಯಾನ್ಸ್ ಭಂಡಾರಿ ಭಾಗವಹಿಸಲಿದ್ದಾರೆ ಎಂದು ಕಾಮತ್ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‌ನ ಭರತ್ ಶೆಟ್ಟಿ, ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ-ಸಂಸ್ಥಾಪಕ ಅಶ್ವತ್ ಎಸ್.ಎಲ್., ಮಣಿಪಾಲದ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಉಪ ಪ್ರಾಂಶುಪಾಲ ಶರತ್ ಎಸ್. ಆಳ್ವ, ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚಿತ್ ಕೋಟ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor