ಕಾರ್ಕಳ: ಸಾಹಿತ್ಯ ಬದುಕಿಗೆ ಒಂದಿಷ್ಟು ಉಲ್ಲಾಸ ಮತ್ತು ಆಕರ್ಷಣೆ ನೀಡುವಂಥದ್ದು. ಜೀವನದಲ್ಲಿ ಏನೂ ಇಲ್ಲ ಅಂತ ಅನಿಸಿದಾಗ ಸಾಹಿತ್ಯದ ಓದು ಜೀವಂತಿಕೆಯನ್ನು ಕೊಡುತ್ತದೆ. ಅಹ್ಲಾದಕರವಾದ ಬದುಕು ಮತ್ತು ಆಂತರಿಕವಾದ ನೆಮ್ಮದಿಗಾಗಿ ಸಾಹಿತ್ಯವನ್ನು ಅಗತ್ಯವಾಗಿ ಓದಬೇಕಿದೆ ಎಂದು ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ, ಮಿತ್ರಪ್ರಭಾ ಹೆಗ್ಡೆ ಹೇಳಿದ್ದಾರೆ.

ಅವರು ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ನಡೆದ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳಲ್ಲಿ ವೇದಿಕೆಯನ್ನು ಬಳಸಿಕೊಳ್ಳುವುದು ಕೆಲವೇ ಕೆಲವರು.ಕೊಟ್ಟ ಕೆಲಸವನ್ನು ಮಾಡಲು ಎಲ್ಲ ವಿದ್ಯಾರ್ಥಿಗಳೂ ಪ್ರಯತ್ನ ಪಡಬೇಕು. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ದುಕೊಂಡು ಕಠಿಣ ಶ್ರಮವಹಿಸಬೇಕು. ಸೋಲಿಗೆ ಹೆದರಿ ಹಿಂಜರಿಯದೆ ಬದುಕನ್ನೆದುರಿಸಬೇಕು. ಜಾತಿ, ಧರ್ಮಗಳಿಂದ ಹೃದಯಗಳಿಗೆ ಗೋಡೆ ಕಟ್ಟದೆ, ವಿಶ್ವಾಸದ ಸೇತುವೆಗಳನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಸಾಹಿತ್ಯದ ಆಸಕ್ತಿ ಎಲ್ಲ ವಿದ್ಯಾರ್ಥಿಗಳಲ್ಲೂ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಕ್ಯೂಎಸಿ ಸಂಯೋಜಕ ಲಕ್ಷ್ಮೀ ನಾರಾಯಣ ಕೆ. ಎಸ್., ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಸಂಘದ ಒಲವಿರುವವರು ಅನೇಕರಿರುತ್ತಾರೆ. ಅವರ ಓದು ಅವರನ್ನು ಸಾಹಿತ್ಯದೆಡೆಗೆ ಪ್ರೇರೇಪಿಸುವಂತೆ ಮಾಡುತ್ತದೆ. ಸಾಹಿತ್ಯ ಸಂಘವು ಅನೇಕ ಹಿರಿಯರು ಉಪನ್ಯಾಸಗಳನ್ನು ನೀಡಿದ ಚಿಂತನಾತ್ಮಕ ವೇದಿಕೆಯಾಗಿದೆ. ಕನಿಷ್ಠ ಬರೆಯುವ ಪ್ರಯತ್ನವನ್ನು ಮಾಡಲು ವಿದ್ಯಾರ್ಥಿಗಳಿಗೆ ಸಾಧ್ಯವಾದರೆ ಸಾಹಿತ್ಯ ಸಂಘದ ಕೆಲಸ ಸಾರ್ಥಕವಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಸಾಹಿತ್ಯ ಸಂಘದ ಪ್ರತಿನಿಧಿ ಪವನ್ ದೇವಾಡಿಗ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕಿ ವನಿತಾ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯ ಸಂಘದ ಪ್ರತಿನಿಧಿ ದಿಶಾ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor