ಕುಂದಾಪುರ, ಅ.8: ಇಲ್ಲಿನ ಪುರಸಭೆ ವ್ಯಾಪ್ತಿಯ ಹೊಸ ಬಸ್ ನಿಲ್ದಾಣ ದಲ್ಲಿ ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆಯವರು ಮೇಕ್ ಮೈ ಟ್ರಿಪ್ ಸಹಯೋಗದಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಆತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸಿದ ಶೌಚಾಲಯದ ಉದ್ಘಾಟನೆ ಗುರುವಾರ ನಡೆಯಿತು.

ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ಶಾಸಕ ಎ. ಕಿರಣ್‌ಕುಮಾರ್ ಕೊಡ್ಗಿ, ಒಳ್ಳೆಯ ವ್ಯವಸ್ಥೆಯನ್ನೊಳಗೊಂಡ ಆಧುನಿಕ ಶೌಚಾಲಯ ನಿರ್ಮಾಣಗೊಂಡಿದ್ದು, ಇದನ್ನು ಸಂಪೂರ್ಣವಾಗಿ ಸುಲಭ್ ಇಂಟರ್‌ನ್ಯಾಷನಲ್ ನಿರ್ವಹಣೆ ಮಾಡಲಿದೆ. ಶೌಚಾಲಯಕ್ಕೆ ನಿರಂತರವಾಗಿ ನೀರಿನ ಪೂರೈಕೆ ಪುರಸಭೆ ಮಾಡಲಿದೆ. ವಿನ್ಯಾಸದಲ್ಲಿ ಕೆಲವು ನ್ಯೂನತೆಗಳನ್ನು ಗಮನಿಸಿದ್ದು, ಅದನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ ಎಂದರು.

ಸುಲಭ್ ಇಂಟರ್ ನ್ಯಾಷನಲ್ ಮುಖ್ಯಸ್ಥ ವಿಶ್ವನಾಥ್ ಮಾತನಾಡಿ, ನಮ್ಮ ಸಂಸ್ಥೆಯಿಂದ ದೇಶದಲ್ಲಿ 20 ಸಾವಿರ ಶೌಚಾಲಯ ನಿರ್ಮಿಸಲಾಗಿದೆ. ರಾಜ್ಯದಲ್ಲಿ 200 ಶೌಚಾಲಯ ನಿರ್ವಹಣೆ ಮಾಡುತ್ತಿದ್ದೇವೆ. ಇಲ್ಲಿನ ಶೌಚಾಲಯ 30 ವರ್ಷ ಹಳೆಯದ್ದಾಗಿದ್ದರಿಂದ ಶಾಸಕರು, ಪುರಸಭೆಯ ಮನವಿಯಂತೆ 30 ಲಕ್ಷ ರೂ. ವೆಚ್ಚದಲ್ಲಿ ಮೇಕ್ ಮೈ ಟ್ರಿಪ್ ಸಹಯೋಗದಲ್ಲಿ ಆಧುನಿಕ ಶೌಚಾಲಯ ನಿರ್ಮಿಸಲಾಗಿದೆ ಎಂದರು.

ಪುರಸಭೆಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್., ಮುಖ್ಯಾಧಿಕಾರಿ ಆನಂದ ಜೆ., ಪರಿಸರ ಎಂಜಿನಿಯರ್ ಗುರುಪ್ರಸಾದ್, ವ್ಯವಸ್ಥಾಪಕಿ ರೇಣುಕಾ, ಆರೋಗ್ಯ ನಿರೀಕ್ಷಕ ರಾಘವೇಂದ್ರ, ಪ್ರಧಾನ ಸಹಾಯಕ ಗಣೇಶ್, ಮೇಕ್ ಮೈ ಟ್ರಿಪ್‌ನ ಶ್ರೀಕಾಂತ್, ಸಂದೇಶ್, ಪುರಸಭೆ ಮಾಜಿ ಅಧ್ಯಕ್ಷ ಮೋಹನ್‌ದಾಸ್ ಶೆಣೈ, ದೇವಕಿ ಸಣ್ಣಯ್ಯ, ಮಾಜಿ ಸದಸ್ಯರಾದ ವಿ. ಪ್ರಭಾಕರ್, ಶ್ರೀಧರ್ ಶೇರೆಗಾರ್, ಅಬು ಮಹಮ್ಮದ್, ಕೇಶವ್ ಭಟ್, ನಾಮನಿರ್ದೇಶಿತ ಸದಸ್ಯರಾದ ಸದಾನಂದ ಖಾರ್ವಿ, ಅಶೋಕ ಸುವರ್ಣ, ಶಶಿ ಕೋಟೆ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor