ಕುಂದಾಪುರ, ಬೈಂದೂರು ತಾಲೂಕುಗಳ ಮಕ್ಕಳಿಗೆ ಕ್ರೀಡಾಕೂಟ
ಕುಂದಾಪುರ, ಅ.10: ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಘಟನೆಯ ಆಶ್ರಯದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಚ್‌ಗಳ ವ್ಯಾಪ್ತಿಯ ಮಕ್ಕಳಿಗೆ ಕ್ರೀಡಾಕೂಟವನ್ನು ಕುಂದಾಪುರ ವ್ಯಾಸರಾಜ ಸಭಾಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಕ್ರೀಡಾ ಜ್ಯೋತಿ ಸ್ವೀಕರಿಸುವ ಮೂಲಕ ಉದ್ಘಾಟಿಸಿದ ಕುಂದಾಪುರ ಸಂಚಾರ ಠಾಣಾ ಎಸ್ಸೈ ಸುಧಾ ಪ್ರಭು ಮಾತನಾಡಿ, ಬಾಲ್ಯದಿಂದ ತಮ್ಮ ಇಷ್ಟದ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಓದಿನೊಂದಿಗೆ ಕ್ರೀಡೆ, ದೈಹಿಕ ವ್ಯಾಯಮಕ್ಕೂ ಆದ್ಯತೆ ಕೊಡಿ. ಕ್ರೀಡೆಯಲ್ಲಿ ಸಕ್ರೀಯರಾಗಿದ್ದರೆ, ಒಳ್ಳೆಯ ಕ್ರೀಡಾಪಟುಗಳಿಗೆ ಸುಲಭದಲ್ಲಿ ಉದ್ಯೋಗ ಸಿಗುತ್ತದೆ ಎಂದರು.
ದಿ ಕನ್ಸರ್ನ್ಡ್ ರ್ಫಾ ವರ್ಕಿಂಗ್ ಚಿಲ್ಡ್ರನ್ ಸಂಘಟನೆ ಕಾರ್ಯಕಾರಿ ನಿರ್ದೇಶಕ ಶಿವಾನಂದ ಶೆಟ್ಟಿ ಮಾತನಾಡಿ, ಈ ದಿನ 40 ಗ್ರಾಮಗಳಿಂದ 250 ಮಕ್ಕಳಿಗೆ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಕ್ರೀಡೆಗಳಿಂದ ಮಕ್ಕಳ ವಿಕಸನ ಗೊಳ್ಳುತ್ತದೆ. ದೈಹಿಕ, ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಸಹಕಾರಿಯಾಗಿದೆ ಎಂದರು.
ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಹಂಸರಾಜ್ ಶೆಟ್ಟಿ ಶುಭ ಹಾರೈಸಿದರು. ಹಂಗಳೂರು ಲಯನ್ಸ್ ಕ್ಲಬ್ ಸದಸ್ಯರಾದ ಮ್ಯಾಥ್ಯೂ ಜೋಸೆಫ್, ವಿಲ್ಫ್ರೆಡ್, ಉದ್ಯಮಿ ಕೆ.ಆರ್.ನಾಯ್ಕ್, ಗಾಣಿಗರ ಸೇವಾ ಸಂಘದ ಕೋಶಾಧಿ ಕಾರಿ ಹೆಚ್.ಎಸ್.ಗಾಣಿಗ, ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಘಟನೆಯ ನರಸಿಂಹ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ಸಂಘಟನೆಯ ಕೃಪಾ ಪ್ರಸ್ತಾವಿಕವಾಗಿ ಮಾತನಾಡಿದರು. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.