ಉಡುಪಿ ನಗರಸಭೆ ಕಾಮಗಾರಿಗಳಿಗೆ ಚುರುಕು ಮುಟ್ಟಿಸುವಂತೆ ಒತ್ತಾಯಿಸಿ ಡಿಸಿಗೆ ಮನವಿ
ಉಡುಪಿ, ಅ.10: ಹಿಂದಿನ ಉಡುಪಿ ನಗರಸಭೆಯ ಆಡಳಿತ ಅಸ್ತಿತ್ವದಲ್ಲಿ ಇರುವಾಗ ಅನುಮೋದನೆ ಕೊಂಡ ಹಲವಾರು ಕಾಮಗಾರಿಗಳು ಇನ್ನು ಆರಂಭವಾಗಿಲ್ಲ, ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸ ಬೇಕು ಮತ್ತು ನಗರಸಭೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಚೇರಿ ಸಮಯದಲ್ಲಿ ತಪ್ಪದೆ ಹಾಜರಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ನಗರ ಬಿಜೆಪಿಯ ನಿಯೋಗವು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಿತು.
ಉಡುಪಿ ನಗರಸಭೆಯು ಜನಪ್ರತಿನಿಧಿಗಳ ಆಡಳಿತವಿಲ್ಲದೆ ನಿಷ್ಕ್ರಿಯ ವಾಗಿದ್ದು ಜನಸಾಮಾನ್ಯರಿಗೆ ಸೇವಾ ಸೌಲಭ್ಯ ಗಳು ತ್ವರಿತಗತಿಯಲ್ಲಿ ಸಿಗುತ್ತಿಲ್ಲ, ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿಗಳು ನಗರಸಭೆಯ ಕಚೇರಿಯ ಸಮಯದಲ್ಲೂ ಕೂಡ ಸೇವೆಗೆ ಲಭ್ಯವಿರುವುದಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ, ಎಸ್‌ಐಆರ್ ಪ್ರಕ್ರಿಯೆಗೆ ಹಲವಾರು ಸರಕಾರಿ ಇಲಾಖೆಗಳ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿದೆ, ಇನ್ನು ಹತ್ತು ದಿನಗಳಲ್ಲಿ ಈ ಪ್ರಕ್ರಿಯೆ ಸಂಪೂರ್ಣಗೊಳ್ಳಲಿದೆ ಮತ್ತು ಎಲ್ಲಾ ಸಿಬ್ಬಂದಿಗಳು ಅವರವರ ಇಲಾಖೆಗಳಲ್ಲಿ ಕಾರ್ಯತತ್ಪರಾಗುತ್ತಾರೆ ಎಂದು ಮಾಹಿತಿ ನೀಡಿದರು.
ನಗರಸಭೆಯ ಹಲವಾರು ಸಮಸ್ಯೆಗಳ ಪರಿಶೀಲನೆ ಮತ್ತು ಪರಿಹಾರಕ್ಕಾಗಿ ನಿಕಟಪೂರ್ವ ನಗರಸಭಾ ಸದಸ್ಯರ ಹಾಗೂ ಅಧಿಕಾರಿಗಳ ಜೊತೆ ಕೂಡಲೆ ಪ್ರತ್ಯೇಕ ಸಭೆ ನಡೆಸುವುದಾಗಿ ಅವರು ತಿಳಿಸಿದರು
‘ಪ್ರತಿದಿನವೆಂಬಂತೆ ಬೀದಿ ನಾಯಿಗಳ ಕಾಟದ ಬಗ್ಗೆ ಹತ್ತಾರು ದೂರು ಗಳನ್ನುತಾವು ಸ್ವೀಕರಿಸುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಪ್ರಾಣಿ ದಯಾ ಸಂಘಟನೆಗಳ ಸ್ಪಂದನೆ ಮತ್ತು ಸಹಕಾರದ ಕೊರತೆ ಇದೆ. ಬೀದಿ ನಾಯಿಗಳನ್ನು ಹಿಡಿದು ಅವುಗಳ ಸಂತಾನ ಶಕ್ತಿಹರಣ ಗೊಳಿಸುವ ಕಾರ್ಯಕ್ರಮಕ್ಕೆ ಹೇರಳವಾದ ಅನುದಾನಗಳು ಬರುತ್ತಿದ್ದು ಅವುಗಳನ್ನು ಹಿಡಿಯುವ ಪ್ರಕ್ರಿಯೆಗೆ ಸಿಬ್ಬಂದಿಗಳು ದೊರಕುತ್ತಿಲ್ಲ ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದರು.
ಉಡುಪಿ ನಗರ ಬಿಜೆಪಿಯ ಅಧ್ಯಕ್ಷ ದಿನೇಶ್ ಅಮೀನ್ ಹಾಗೂ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್ ಪೂಜಾರಿ ನೇತೃತ್ವದ ನಿಯೋಗದಲ್ಲಿ ಉಡುಪಿ ನಗರ ಬಿಜೆಪಿಯ ಪ್ರಮುಖರು ಮತ್ತು ನಿಕಟ ಪೂರ್ವ ನಗರಸಭಾ ಸದಸ್ಯರು ಹಾಜರಿದ್ದರು.