ಕೋಟ: ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಕೋಟ: ಕೋಟ ಕಾರಂತ ಕಲಾಭವನದಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ ಹಾಗೂ ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ, ಕೋಟ ಆಶ್ರಯದಲ್ಲಿ ನಡೆದ 2025ನೇ ಸಾಲಿನ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಸಮಾರಂಭ ಅ.10 ರಂದು ನಡೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಕಾರ್ಯಕ್ರಮ ಉದ್ಘಾಟಿಸಿ, ಕಾರಂತ ಹುಟ್ಟೂರು ಪ್ರಶಸ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
2025 ನೇ ಸಾಲಿಗೆ ಸಾಹಿತಿ ಎ.ಎಸ್.ಎನ್. ಹೆಬ್ಬಾರ್, 2026ಕ್ಕೆ ವೈದ್ಯ ಡಾ. ರಾಹುಲ್ ದೇವರಾಜ್ ಅವರಿಗೆ ಪ್ರಶಸ್ತಿ ಪ್ರದಾನಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ರಾಷ್ಟ್ರೀಯ ಮಟ್ಟದ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕೋಟತಟ್ಟು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಪ್ರತಾಪ್ ಚಂದ್ರ ಶೆಟ್ಟಿ, ಪ್ರತಿಷ್ಠಾನದ ಸದಸ್ಯರಾದ ಸುಬ್ರಾಯ ಆಚಾರ್ಯ, ಸುಶೀಲಾ ಸೋಮಶೇಖರ್, ಪಿಡಿಒ ರವೀಂದ್ರ ರಾವ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಮತಿ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.
ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್ ಸ್ವಾಗತಿಸಿದರು. ಸಂಸದ ಹಾಗೂ ಪ್ರತಿಷ್ಠಾನದ ನಿರ್ದೇಶಕ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕ ಯು.ಎಸ್. ಶೆಣೈ ಪ್ರಶಸ್ತಿ ಆಯ್ಕೆಯ ಕುರಿತು ಮಾಹಿತಿ ನೀಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.