ಮಣಿಪಾಲದ ಡಾ. ರಾಮದಾಸ್ ಎಂ. ಪೈಗೆ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಟ್ ಬಿಲ್ಡರ್ ಅವಾರ್ಡ್’
ಉಡುಪಿ, ಅ.10:ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಕುಲಾಧಿಪತಿಗಳಾದ ಡಾ.ರಾಮದಾಸ್ ಎಂ. ಪೈ ಅವರು ಫೆಡರೇಷನ್ ಆಫ್ ಇಂಡಿಯನ್ ಛೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ನೀಡುವ ಪ್ರತಿಷ್ಠಿತ ‘ಲೆಜೆಂಡರಿ ಇನ್‌ಸ್ಟಿಟ್ಯೂಟ್ ಬಿಲ್ಡರ್ ಅವಾರ್ಡ್- 2026’ಕ್ಕೆ ಭಾಜನರಾಗಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ 21ನೇ (ಎಫ್‌ಐಸಿಸಿಐ) ಉನ್ನತ ಶಿಕ್ಷಣ ಶೃಂಗಸಭೆಯ ಅಂಗವಾಗಿ ಆಯೋಜಿಸಲಾದ 12ನೇ ಎಫ್‌ಐಸಿಸಿಐ ಉನ್ನತ ಶಿಕ್ಷಣ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವ ಡಾ. ಮುರಳಿ ಮನೋಹರ ಜೋಶಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಡಾ. ರಾಮದಾಸ್ ಎಂ. ಪೈ ಅವರ ಪರವಾಗಿ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಗೌರವವನ್ನು ಸ್ವೀಕರಿಸಿದರು.
ಶಿಕ್ಷಣ, ಆರೋಗ್ಯ ಸೇವೆ, ಸಂಶೋಧನೆ ಹಾಗೂ ಸಮಾಜಪರ ಕಾರ್ಯಗಳ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಡಾ. ರಾಮದಾಸ್ ಎಂ. ಪೈ ಅವರು ನೀಡಿರುವ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಡಾ.ರಾಮದಾಸ ಪೈ ಅವರು 2018ರಲ್ಲಿ ಎಫ್ಸಿಸಿಐಯ ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಪಾತ್ರರಾಗಿದ್ದರು.
ಮಣಿಪಾಲವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿ ಬೆಳೆಸಿದ ಡಾ.ತೋನ್ಸೆ ಮಾಧವ ಅನಂತ ಪೈ (ಡಾ.ಟಿಎಂಎ ಪೈ) ಅವರ ಪುತ್ರರಾದ ಡಾ. ರಾಮದಾಸ ಪೈ ತಂದೆಯವರಿಂದ ಪ್ರೇರಣೆ ಪಡೆದು ಶಿಕ್ಷಣ ಮತ್ತು ಆರೋಗ್ಯಸೇವೆಯ ಮೂಲಕ ಮಣಿಪಾಲವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿ ಡಾ. ರಾಮದಾಸ ಪೈ ವೃತ್ತಿಜೀವನ ಆರಂಭಿಸಿ ಶಿಕ್ಷಣ ಸಂಸ್ಥೆಗಳನ್ನು ಮತ್ತು ವೈದ್ಯಕೀಯ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು.
1979ರಲ್ಲಿ ಡಾ.ಮಾಧವ ಪೈ ಅವರ ನಿಧನದ ಬಳಿಕ ಮಣಿಪಾಲ ಸಮೂಹ ಸಂಸ್ಥೆಗಳ ವಿಸ್ತರಣೆಯ ನೇತೃತ್ವ ವಹಿಸಿ, ತಮ್ಮ ದೂರದೃಷ್ಟಿ, ದೃಢಸಂಕಲ್ಪ ಮತ್ತು ಕ್ರಿಯಾಶೀಲತೆಯಿಂದ ಶೈಕ್ಷಣಿಕ ವಿಭಾಗಗಳು, ಆರೋಗ್ಯ ಸೇವಾಸಂಸ್ಥೆಗಳನ್ನು ವಿಸ್ತರಿಸಿದರು. ಡಾ. ರಾಮದಾಸ ಪೈಯವರ ಪ್ರಯತ್ನದ ಫಲವಾಗಿ ಮಣಿಪಾಲ ಸಮೂಹ ಸಂಸ್ಥೆಗಳು ನೇಪಾಳ, ಮಲೇಷ್ಯಾ, ಸಂಯುಕ್ತ ಅರಬ್ ಎಮಿರೇಟ್ಸ್ ಹಾಗೂ ಆಂಟಿಗುವಾಕ್ಕೆ ವಿಸ್ತರಣೆಗೊಂಡಿದ್ದವು.
ದೂರದೃಷ್ಟಿ, ನಾಯಕತ್ವ ಹಾಗೂ ನಿರಂತರ ಪ್ರಯತ್ನಗಳಿಂದ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಶಾಶ್ವತ ಸ್ಥಾನಮಾನ ಹೊಂದಿರುವ ಸಂಸ್ಥೆಗಳನ್ನು ಸ್ಥಾಪಿಸಿರುವ ಸಾಧಕ ವ್ಯಕ್ತಿಗಳನ್ನು ಗುರುತಿಸಿ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಟ್ ಬಿಲ್ಡರ್ ಅವಾರ್ಡ್’ ನೀಡಿ ಗೌರವಿಸುತ್ತದೆ.
(ಡಾ.ರಾಮದಾಸ್ ಎಂ. ಪೈ)