ಬರಗೂರು ರಾಮಚಂದ್ರಪ್ಪ, ಶ್ರೀಪಾದ್ ಭಟ್, ಜಾನ್ ಡಿಸೋಜ, ಯು.ಮಹೇಶ್ವರಿ, ಡಾ.ಪಿ.ವಿ.ಭಂಡಾರಿ, ಗಣೇಶ ಕೊರಗ

ಉಡುಪಿ, ಅ.17: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಡಾ. ಶಿವರಾಮ ಕಾರಂತ ಟ್ರಸ್ಟ್ ಕಾರಂತರ ಜನ್ಮ ದಿನಾಚರಣೆಯ ಪ್ರಯುಕ್ತ ನೀಡುವ ಈ ಬಾರಿಯ ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಕನ್ನಡದ ಖ್ಯಾತ ಸಾಹಿತಿ, ಹಿರಿಯ ವಿದ್ವಾಂಸ, ಸಂಸ್ಕೃತಿ ಚಿಂತಕ, ಬಂಡಾಯ ಲೇಖಕ ಡಾ.ಬರಗೂರು ರಾಮಚಂದ್ರಪ್ಪರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು 25,000ರೂ.ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದೇ ಅಕ್ಟೋಬರ್ 24ರಂದು ಸಂಜೆ 4:00ಗಂಟೆಗೆ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ.ಕೆ.ಎಂ ವಸುಂಧರಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಾರ್ಯಕ್ರಮವನ್ನು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಟ್ರಸ್ಟ್‌ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ತಿಳಿಸಿದ್ದಾರೆ.

ಐವರಿಗೆ ವಿಶೇಷ ಪುರಸ್ಕಾರ: ಇದೇ ಸಂದರ್ಭದಲ್ಲಿ ಖ್ಯಾತ ರಂಗತಜ್ಞ, ನಿರ್ದೇಶಕ ಡಾ.ಶ್ರೀಪಾದ್ ಭಟ್, ಖ್ಯಾತ ಮನೋವೈದ್ಯ, ಲೇಖಕ ಮತ್ತು ಸಾಮಾಜಿಕ ಹೋರಾಟಗಾರ ಡಾ.ಪಿ.ವಿ.ಭಂಡಾರಿ, ಕೊರಗ ಸಮಾಜದ ಮುಖಂಡ ಹಾಗೂ ಸಮಾಜ ಸೇವಕ ಗಣೇಶ್ ಕೊರಗ ಕುಂಭಾಶಿ, ನಿವೃತ್ತ ಪ್ರಾಧ್ಯಾಪಕಿ ಮತ್ತು ಲೇಖಕಿ ಯು.ಮಹೇಶ್ವರಿ ಕಾಸರಗೋಡು ಹಾಗೂ ಕುಂದಾಪುರದ ಹಿರಿಯ ಪತ್ರಕರ್ತ ಜಾನ್ ಡಿಸೋಜ ಇವರಿಗೆ ಕಾರಂತ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಡಾ.ಗಣನಾಥ ಎಕ್ಕಾರು ತಿಳಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ.ಧನಂಜಯ ಕುಂಬ್ಳೆ, ಚಿಂತಕಿ ರೇಖಾ ಬನ್ನಾಡಿ, ಕಾರ್ಕಳ ಕರಾವಳಿ ರಂಗಾಯಣ ನಿರ್ದೇಶಕ ವೆಂಕಟರಮಣ ಐತಾಳ ಇವರನ್ನೊಳಗೊಂಡ ಸಮಿತಿ ಈ ಆಯ್ಕೆ ನಡೆಸಿದೆ.

ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಟ್ರಸ್ಟಿನ ತ್ರೈಮಾಸಿಕ ಬುಲೆಟಿನ್‌ಅನ್ನು ಬಿಡುಗಡೆಗೊಳಿಸಲಿದ್ದಾರೆ. ಮಾಜಿ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ತಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್ ಹರಿಪ್ರಸಾದ ಶೆಟ್ಟಿ, ಕಾರ್ಕಳ ಕರಾವಳಿ ರಂಗಾಯಣದ ನಿರ್ದೇಶಕ ಡಾ.ಬಿ.ಆರ್ ವೆಂಕಟರಮಣ ಐತಾಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂದು ಬೆಳಿಗ್ಗೆ 10ರಿಂದ ಅಪರಾಹ್ನ 3:00 ಗಂಟೆಯವರೆಗೆ ‘ಕಾರಂತರ ಕಥನಗಳ ವರ್ತಮಾನದ ಮರು ಓದು’ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ವಿಚಾರ ಸಂಕಿರಣವನ್ನು ಸಾಂಸ್ಕೃತಿಕ ಚಿಂತಕ ಮತ್ತು ಹಿರಿಯ ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್ ಉದ್ಘಾಟಿಸಲಿದ್ದು, ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಭಾಗವಹಿಸಲಿದ್ದಾರೆ. ಮಂಗಳೂರು ವಿವಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಕಾಸರಗೋಡು ಕೇರಳ ಕೇಂದ್ರಿಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಚೇತನ್ ಮುಂಡಾಜೆ, ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಮತ್ತು ಲೇಖಕಿ ಡಾ. ರೇಖಾ ಬನ್ನಾಡಿ, ಧಾರವಾಡ ಕರ್ನಾಟಕ ವಿವಿಯ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ಡಾ.ಮಲ್ಲಪ್ಪ ಎಸ್ ಬಂಡಿ ಭಾಗವಹಿಸಲಿದ್ದಾರೆ.

ಮಂಗಳೂರು ವಿಶ್ವ ವಿದ್ಯಾನಿಲಯ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಉಪನ್ಯಾಸಕ ಡಾ. ಯಶು ಕುಮಾರ್ ಡಿ, ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಸುಧಾಕರ್ ದೇವಾಡಿಗ, ವಿಶ್ರಾಂತ ಇಂಗ್ಲೀಷ್ ಪ್ರಾಧ್ಯಾಪಕಿ ಮತ್ತು ಲೇಖಕಿ ಡಾ. ಪಾರ್ವತಿ ಜಿ. ಐತಾಳ್, ಪ್ರಾಂಶುಪಾಲೆ ಮತ್ತು ಚಿಂತಕಿ ಡಾ.ನಿಕೇತನ, ರಂಗತಜ್ಞ ಡಾ.ಶ್ರೀಪಾದ್ ಭಟ್, ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಹಾಗೂ ಪ್ರಾಧ್ಯಾಪಕ ಡಾ.ಪ್ರಸಾದ್‌ರಾವ್ ಪ್ರತಿಕ್ರಿಯೆ ನೀಡಲಿದ್ದಾರೆ.

ಅಪರಾಹ್ನ 3:00ರಿಂದ ಕರಾವಳಿ ರಂಗಾಯಣ ಕಾರ್ಕಳದ ರೆಪರ್ಟರಿ ತಂಡದವರು ಪ್ರಸ್ತುತ ಪಡಿಸುವ ಬಿ.ಆರ್ ವೆಂಕಟರಮಣ ಐತಾಳ ನಿರ್ದೇಶನದ ಕಾರಂತ ಕಥನ ನಾಟಕ ಪ್ರದರ್ಶನ ನಡೆಯಲಿದೆ. ಇದೇ ವೇಳೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಡಾ.ಗಣನಾಥ ಎಕ್ಕಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor