ಬ್ರಹ್ಮಾವರ: ಸೊಸೈಟಿಗೆ ಆಸ್ತಿ ದಾಖಲೆ ಸಲ್ಲಿಸಿ ಕೋಟ್ಯಂತರ ರೂ. ಸಾಲ ಪಡೆದಿರುವ ಕುರಿತು ಸತ್ಯಾಸತ್ಯತೆಯ ತನಿಖೆ ನಡೆಸುವಂತೆ ನೀಡಿರುವ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು. ಅಭಿಷೇಕ್ ಮತ್ತು ರಮಾ ಜೆ.ರಾವ್ ಎಂಬವರು ಆಸ್ತಿಗೆ ಸಂಬಂಧಿಸಿದ ಕ್ರಯಸಾಧನ ಹಾಗೂ ಅಡಮಾನ ದಾಖಲೆಗಳನ್ನು ಸಲ್ಲಿಸಿ 1,60,00,000ರೂ. ಸಾಲಕ್ಕೆ ಉಡುಪಿಯ ಎಸ್‌ಜಿಆರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಅರ್ಜಿ ಸಲ್ಲಿಸಿದ್ದರು. ಈ ಸಾಲದ ವ್ಯವಹಾರದ ಕ್ರಯಸಾಧನ ಹಾಗೂ ಅಡಮಾನಕ್ಕೆ ಸಂಬಂಧಿಸಿದ ದಾಖಲೆಗಳು ಸೆ.17ರಂದು ಬ್ರಹ್ಮಾವರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗಿರುತ್ತದೆ.

ಈ ದಾಖಲೆಗಳನ್ನು ಮೂಲ ದಾಖಲೆಗಳೆಂದು ನಂಬಿ ಸೊಸೈಟಿಯು ಒಟ್ಟು 1,00,00,500ರೂ. ಮೊತ್ತವನ್ನು ಅಭಿಷೇಕ್ ಮತ್ತು ರಮಾ ಅವರಿಗೆ ಬಿಡುಗಡೆ ಮಾಡಿತ್ತು. ನಂತರ ಈ ಆಸ್ತಿಗೆ ಸಂಬಂಧಿಸಿದ ಮೊಹಮ್ಮದ್ ಶಾಕೀರ್ ದಾಖಲೆಗಳ ಸತ್ಯಾಸತ್ಯತೆ ಹಾಗೂ ತಮ್ಮ ಸಹಿ ಮತ್ತು ಇತರೆ ದಾಖಲೆಗಳ ದುರುಪಯೋಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ನಕಲಿ ದಾಖಲೆಗಳ ಸೃಷ್ಟಿ, ವಂಚನೆ ಹಾಗೂ ಅವುಗಳನ್ನು ಅಸಲಿ ದಾಖಲೆಗಳೆಂದು ಬಳಸಿರುವ ಬಗ್ಗೆ ಸತ್ಯಾಸತ್ಯತೆಯ ತನಿಖೆ ನಡೆಸುವ ಉದ್ಧೇಶದಿಂದ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಕೋರಿ ಉಡುಪಿಯ ಎಸ್‌ಜಿಆರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ದೂರು ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor