ಬ್ರಹ್ಮಾವರ, ಉಡುಪಿ, ಅ.17: ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಬ್ರಹ್ಮಾವರ ತಾಲೂಕು ಇವರ ನೇತೃತ್ವದಲ್ಲಿ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಉಡುಪಿ ಜಿಲ್ಲೆ ಮತ್ತು ಯು-ಆಕ್ಟ್ ಸಹಯೋಗದಲ್ಲಿ ಬ್ರಹ್ಮಾವರ ಬಂಟರ ಭವನದ ಮೀನಾಕ್ಷಿ ನಾರಾಯಣ ಶೆಟ್ಟಿ ಸಭಾಂಗಣದಲ್ಲಿ ಶನಿವಾರ ಬ್ರಹ್ಮಾವರ ತಾಲೂಕು ವಿವಿಧ ಸಂಘ ಸಂಸ್ಥೆಗಳ ಹಕ್ಕೊತ್ತಾಯ ಸಭೆ ನಡೆಯಿತು.

ಕರಾವಳಿ ಕರ್ನಾಟಕ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕ ಹಾಗೂ ‘ಯು-ಆಕ್ಟ್’ ಸಂಸ್ಥಾಪಕ, ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಮಾತನಾಡಿ, ಕಳೆದ ಎರಡು ದಶಕಗಳಿಂದ ಕರಾವಳಿಯಲ್ಲಿ ಹೈಕೋರ್ಟ್ ನ್ಯಾಯಪೀಠ ಸ್ಥಾಪಿಸಿ ನ್ಯಾಯದಾನದ ಹಕ್ಕು ಸಾಮಾನ್ಯ ಜನರಿಗೆ ಕ್ಷಿಪ್ರವಾಗಿ ಮತ್ತು ಸುಲಲಿತವಾಗಿ ಸಿಗುವಂತೆ ಒತ್ತಾಯಿಸಲಾಗುತ್ತಿದೆ. ಇದು ಸಾಂವಿಧಾನಿಕ ಬೇಡಿಕೆಯ ಆಶಯವಾಗಿದೆ ಎಂದು ಹೇಳಿದರು.

ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಎಲ್ಲಾ ರೀತಿಯಲ್ಲೂ ವಿಭಿನ್ನವಾಗಿದೆ. ಭೂಮಿಗೆ ಸಂಬಂಧಿತ, ಶೈಕ್ಷಣಿಕ, ಆರ್ಥಿಕ, ಮೀನುಗಾರರು, ಸಿಆರ್‌ಝಡ್, ಕೌಟುಂಬಿಕ ಸಮಸ್ಯೆಗಳಿಗೆ ಈ ಭಾಗದ ಲಕ್ಷಾಂತರ ಸಾರ್ವಜನಿಕರು, ರೈತರು, ವ್ಯಾಪಾರಿಗಳು ಹಾಗೂ ಕಕ್ಷಿಗಾರರು ಅಪೀಲು, ಮೇಲ್ಮನವಿಗಳಿಗಾಗಿ ಬೆಂಗಳೂರಿನ ಪ್ರಧಾನ ಪೀಠಕ್ಕೆ 400-500 ಕಿ.ಮೀ.ಗೂ ಅಧಿಕ ದೂರ ಪ್ರಯಾಣಿಸುವುದು ಆರ್ಥಿಕವಾಗಿ ಮಾತ್ರವಲ್ಲದೆ ಮಾನಸಿಕ ವಾಗಿ, ದೈಹಿಕವಾಗಿ ಪರಿಶ್ರಮ ಪಡಬೇಕಾಗುತ್ತದೆ.

ಜಸ್ಟೀಸ್ ಜಸ್ವಂತ್ ಸಿಂಗ್ ಕಮಿಟಿ ನೀಡಿದ ವರದಿಯಂತೆ ಹಲವು ವರ್ಷಗಳ ಹಿಂದೆ ಬೇರೆ ರಾಜ್ಯಗಳ ಸಹಿತ ನಮ್ಮ ರಾಜ್ಯದ ಧಾರವಾಡ, ಕಲ್ಬುರ್ಗಿಯಲ್ಲಿ ಪೀಠಗಳಾಗಿದೆ. ಪ್ರಸ್ತುತ ಮುಖ್ಯ ನ್ಯಾಯಪೀಠದಲ್ಲಿ ಕರಾವಳಿಯ ಲಕ್ಷಾಂತರ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದೆ. ಕೆಳ ನ್ಯಾಯಲಯದಲ್ಲೂ ಲಕ್ಷದಷ್ಟು ಪ್ರಕರಣ ಬಾಕಿಯಿದ್ದು ಒಂದೊಮ್ಮೆ ಇದು ಇತ್ಯರ್ಥವಾದರೆ ಹೈಕೋರ್ಟ್‌ನಲ್ಲಿ ಪ್ರಕರಣ ಒತ್ತಡ ಹೆಚ್ಚಲಿದೆ. ಇದರಿಂದ ಕಾನೂನು ವಿರೋಧಿಗಳ ಷಡ್ಯಂತ್ರಗಳು ಹೆಚ್ಚುವ ಆತಂಕವೂ ಇದೆ. ನ್ಯಾಯಾಂಗದ ಮೇಲಿನ ಒತ್ತಡ ಗಮನಿಸಿ ಉತ್ತಮ ನ್ಯಾಯದಾನದ ಬಗ್ಗೆ ಹಿತಾಸಕ್ತಿ ಹೊಂದಿ ಕರಾವಳಿಯ ಬಡವರು, ಮೀನುಗಾರರು, ಮದ್ಯಮ ಹಾಗೂ ಹಿಂದುಳಿದ ವರ್ಗದ ಜನರ ಆಶೋತ್ತರಗಳಿಗೆ ಪೂರಕವಾಗಿ ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮುಂದಾಗಬೇಕೆಂದು ಒಗ್ಗಟ್ಟಿನ ಹೋರಾಟ ನಡೆಯುತ್ತಿದೆ ಎಂದರು.

ದಸಂಸ ಮುಖಂಡ ಶೇಖರ ಹಾವಂಜೆ ಮಾತನಾಡಿ, ಕರಾವಳಿ ಭಾಗದಿಂದ ಸರಕಾರಕ್ಕೆ ತೆರಿಗೆ ಬೇಕು. ಹಾಗೆಯೇ ನ್ಯಾಯಯುತ ಬೇಡಿಕೆಗಳಿಗೆ ಇಲ್ಲಿನ ಜನರಿಗೆ ಅಗತ್ಯ ಸ್ಪಂದನೆಯೂ ನೀಡಬೇಕು. ಭೂಮಿ ಮಂಜೂರಾತಿ, ಒತ್ತುವರಿ ಸಹಿತ ಜ್ವಲಂತ ಹಲವು ಸಮಸ್ಯೆಗಳಿಗೆ ಹೈಕೋರ್ಟ್ ಪರಿಹಾರವಾಗಿದೆ. ಹೈಕೋರ್ಟ್ ಪೀಠವು ಕರಾವಳಿಯಲ್ಲಿಯೇ ಅದರಲ್ಲೂ ಬ್ರಹ್ಮಾವರದಲ್ಲಿಯೇ ಆದರೆ ಉತ್ತಮ ಎಂದರು.

ರಾಜಕೀಯ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಕರಾವಳಿಯಲ್ಲಿ ವಿವಿಧ ರೀತಿಯ ಸಮಸ್ಯೆಗಳಿದೆ. ಅದರ ಪರಿಹಾರಕ್ಕೆ, ಕ್ಷಿಪ್ರಗತಿಯ ನ್ಯಾಯದಾನಕ್ಕೆ ಇಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅನಿವಾರ್ಯ ವಾಗಿದ್ದು ನ್ಯಾಯಾಂಗ ಇನ್ನಷ್ಟು ಬಲಿಷ್ಟವಾಗಲಿದೆ. ಈಗಾಗಲೇ ಮೂವರು ನ್ಯಾಯಾಧೀಶರ ಸಮಿತಿ ರಚಿಸಿದ್ದು ಹೋರಾಟ ನಡೆಸುವ ನಮಗೆ ಆಶಾದಾಯಕವಾಗಿದೆ. ಅಗತ್ಯ ಬಿದ್ದರೆ ಹೋರಾಟಗಾರರ ಜೊತೆಗೂಡಿ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತೇವೆ ಎಂದರು.

ಸಾಮಾಜಿಕ ಹೋರಾಟಗಾರ ಜ್ಞಾನವಸಂತ ಶೆಟ್ಟಿ, ನಮ್ಮ ಭೂಮಿಯ ರಾಮಾಂಜಿ, ನ್ಯಾಯವಾದಿಗಳಾದ ಕಾಡೂರು ಪ್ರವೀಣ ಶೆಟ್ಟಿ, ಅಖಿಲ್ ಹೆಗ್ಡೆ, ಆರ್.ಟಿ.ಐ ಕಾರ್ಯಕರ್ತ ಸದಾಶಿವ ಶೆಟ್ಟಿ ಹಕ್ಕೊತ್ತಾಯ ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು.

ಜಿ.ಪಂ. ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಪ್ರಮುಖರಾದ ಶೇಡಿಕೊಡ್ಲು ವಿಠಲ ಶೆಟ್ಟಿ, ಬಾರ್ಕೂರು ಶಾಂತಾರಾಮ ಶೆಟ್ಟಿ, ಬ್ರಹ್ಮಾವರ ಸ್ಫೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ, ಸಮತಾ ಸೈನಿಕದಳದ ಮಹಿಳಾ ಅಧ್ಯಕ್ಷೆ ಜ್ಯೋತಿ ಶಿರಿಯಾರ, ಹಿರಿಯ ನಾಗರಿಕರ ವೇದಿಕೆಯ ಮಾಜಿ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಕಾರ್ಯದರ್ಶಿ ಸಂಕಯ್ಯ ಶೆಟ್ಟಿ, ಲಯನ್ಸ್ ಅಧ್ಯಕ್ಷ ಸುದೇಶ್ ಹೆಗ್ಡೆ, ಮಾಜಿ ಅಧ್ಯಕ್ಷ ಜಿ. ಬಾಲಕೃಷ್ಣ ಶೆಟ್ಟಿ, ರೋಟರಿ ಅಧ್ಯಕ್ಷ ಪ್ರಮೋದ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಮಹೇಶ್ ತಡೆಕಲ್ಲು, ವಕೀಲರ ಸಂಘದ ಸದಸ್ಯರು, ವಿವಿಧ ಸಂಘಟನೆಗಳ ಪ್ರಮುಖರು, ಹಿರಿಯ ನಾಗರಿಕರ ವೇದಿಕೆ ಸದಸ್ಯರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಾಮಾಜಿಕ ಹೋರಾಟಗಾರ ಆಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು.

‘ಕಾರ್ಯಾಂಗದಲ್ಲಿ ವಿಕೇಂದ್ರೀಕರಣವಾಗಿದ್ದರಿಂದ ಜನರಿಗೆ ಅನುಕೂಲ ವಾಗಿದೆ. ಆದರೆ ನ್ಯಾಯಾಂಗದಲ್ಲಿ ಇನ್ನಷ್ಟು ವಿಕೇಂದ್ರೀಕರಣದ ಅಗತ್ಯವಿದ್ದು ಬುದ್ದಿವಂತರ ಜಿಲ್ಲೆಯಲ್ಲಿ ನ್ಯಾಯದಾನ ವ್ಯವಸ್ಥೆ ಬಲಿಷ್ಟವಾಗಲು ಸಮಾಜಮುಖಿ ಚಿಂತನೆ ಅಗತ್ಯ. ನೀತಿ ಆಯೋಗ, ರಾಷ್ಟ್ರೀಯ ಕಾನೂನು ಆಯೋಗ ನ್ಯಾಯದಾನ ವ್ಯವಸ್ಥೆ, ಪೀಠ ಸ್ಥಾಪನೆ ಬಗ್ಗೆ ನೀಡಿದ ವರದಿ ಆಧಾರದಲ್ಲಿಯೇ ಕರಾವಳಿ ಜಿಲ್ಲೆಗೆ ಅನುಕೂಲವಾಗುವಂತೆ ನ್ಯಾಯಪೀಠ ಆಗಲಿ ಎಂಬ ಹಕ್ಕೊತ್ತಾಯ ನಮ್ಮದು. ಮುಂದಿನ ದಿನಗಳಲ್ಲಿ ಮೂವರು ನ್ಯಾಯಮೂರ್ತಿಗಳ ಸಮಿತಿಗೆ ಜಿಲ್ಲೆಗಳಲ್ಲಿರುವ ಪ್ರಕರಣಗಳ ವಿವರ, ಪ್ರಯಾಣ ವೆಚ್ಚದ ದತ್ತಾಂಶಗಳು ಹಾಗೂ ಸೂಕ್ತ ಮೂಲಸೌಕರ್ಯಗಳ ಮಾಹಿತಿ ಸಲ್ಲಿಸಲಾಗುತ್ತದೆ.

-ಪ್ರೇಮ್ ಪ್ರಸಾದ್ ಶೆಟ್ಟಿ, ನ್ಯಾಯವಾದಿ, ಕರಾವಳಿ ಕರ್ನಾಟಕ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕ ಹಾಗೂ ‘ಯು-ಆಕ್ಟ್’ ಸಂಸ್ಥಾಪಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor