ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ
ಕುಂದಾಪುರ, ಅ.26: ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಹಾಗೂ ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದ ಗಾಂಧಿ ಮೈದಾನದಲ್ಲಿ 3 ದಿನಗಳ ಕಾಲ ಆಯೋಜಿ ಸಲಾದ ದೇಶದ ಬಲಿಷ್ಠ 6 ತಂಡಗಳನ್ನು ಒಳಗೊಂಡ ಕೆ.ಎಫ್.ಕೆ. ಟ್ರೋಫಿ- 2026 ಹೊನಲು ಬೆಳಕಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ರವಿವಾರ ಉದ್ಘಾಟಿಸಿದರು.
ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಉದ್ಯಮಿ ಜಯಶೀಲ ಶೆಟ್ಟಿ ಘಟಪ್ರಭಾ ಶುಭಹಾರೈಸಿದರು. ಯಡಾಡಿ- ಮತ್ಯಾಡಿಯ ಸುಜ್ಞಾನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಮಾತನಾಡಿದರು. ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಗೌರವಾಧ್ಯಕ್ಷ ಯು.ರಾಜೇಶ್ ಕಾರಂತ್ ವಹಿಸಿದ್ದರು.
ಅಸೋಸಿಯೇಶನ್ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ರಾಷ್ಟ್ರೀಯ ವಾಲಿಬಾಲ್ ಪಟುಗಳಾದ ದಾಮೋದರ ಶೆಟ್ಟಿ, ನಾಗರಾಜ್ ಹೆಗ್ಡೆ, ರಾಜ್ಯ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಹರ್ಷ ಆರ್., ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಗೌತಮ್ ಶೆಟ್ಟಿ ಟಾರ್ಪಡೋಸ್, ಹೋಟೆಲ್ ಉದ್ಯಮಿ ಗಣೇಶ್ ಭಟ್, ಸುಜ್ಞಾನ ಶಿಕ್ಷಣ ಸಂಸ್ಥೆ ಕೋಶಾಧಿಕಾರಿ ಭರತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಉದ್ಘಾಟನೆಗೂ ಮುನ್ನ ಪ್ರವಿತಾ ಅಶೋಕ ತಂಡದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ಗೊಂಡಿತು. ಕೇರಳದ ಚೆಂಡೆ ವಾದನ, ಬ್ಯಾಂಡ್ಸೆಟ್, ಕೊಂಬು ಹಾಗೂ ಪಟಾಕಿಗಳ ಅಬ್ಬರ ಪಂದ್ಯಾಟದ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು.
ಸ್ವಾಗತ ಸಮಿತಿ ಅಧ್ಯಕ್ಷ ದಿನೇಶ್ ಹೆಗ್ಡೆ ಮೊಳಹಳ್ಳಿ ಸ್ವಾಗತಿಸಿ, ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಗೌರವಾ ಧ್ಯಕ್ಷ ರಾಜೇಶ್ ಕಾವೇರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಅಧ್ಯಕ್ಷ ರಮಾನಂದ ಕೆ. ವಂದಿಸಿದರು. ಸದಸ್ಯ ರಾಜೇಶ್ ಕೆ.ಸಿ. ಹಾಗೂ ಆರೂರು ತಿಮ್ಮಪ್ಪ ನಿರೂಪಿಸಿದರು.
ಪಂದ್ಯಗಳ ಫಲಿತಾಂಶ
ರವಿವಾರ ಸಂಜೆ ನಡೆದ 3 ನೇ ಪಂದ್ಯದಲ್ಲಿ ಇಂಡಿಯನ್ ಓರ್ವ ಸೀಸ್ ಬ್ಯಾಂಕ್ ತಂಡವು ಟೀಂ ಕರ್ನಾಟಕ ವಿರುದ್ಧ 25-17, 25-21, 18-25 ಹಾಗೂ 25-21 ಅಂತರದಿಂದ ಗೆದ್ದು, ಪಂದ್ಯಾವಳಿಯ 2ನೇ ಜಯ ಗಳಿಸಿತು.
ನಂತರ ನಡೆದ ಪಂದ್ಯದಲ್ಲಿ ಭಾರತೀಯ ನೇವಿ ತಂಡವನ್ನು ಕೇರಳ ಸ್ಟೇಟ್ ಎಲೆಕ್ಟ್ರೀಸಿಟಿ ಬೋರ್ಡ್ ತಂಡವು 25-23, 18-25, 25-11, 25-19 ಅಂಕಗಳ ಅಂತರದಿಂದ ಗೆದ್ದು, 2 ನೇ ಗೆಲುವು ಸಾಧಿಸಿತು. ದಿನದ ಕೊನೆಯ ಪಂದ್ಯದಲ್ಲಿ ಕೇರಳ ಪೊಲೀಸ್ ತಂಡದ ವಿರುದ್ಧ ಚೆನ್ನೈ ಸಿಕ್ಸ್ ತಂಡವು 23-25, 25-20, 25-22, 22-25, 15-08 ಅಂತರದಿಂದ ಗೆದ್ದು, ಮೊದಲ ಜಯ ದಾಖಲಿಸಿತು. ಅ.27 ಪಂದ್ಯಾಟದ ಕೊನೆಯ ದಿನವಾಗಿದ್ದು, ಈ 6 ತಂಡಗಳ ನಡುವಿನ ವಿಜೇತರು ಯಾರೆಂದು ನಿರ್ಧಾರವಾಗಲಿದೆ.