ಕುಂದಾಪುರ, ಅ.26: ಸತ್ಯ, ಧರ್ಮ, ತ್ಯಾಗ, ಕರ್ತವ್ಯ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ಸಾಹಿತ್ಯದ ಮೂಲಕ ಜಗತ್ತಿಗೆ ಸಾರಿದ ಮಹಾನ್ ಋಷಿ ವಾಲ್ಮೀಕಿ. ಗುರುಗಳ ಮಹಾನ್ ಗುರುಗಳು, ಕವಿಗಳಿಗೆ ಮಹಾನ್ ಕವಿ ಮಹರ್ಷಿ ವಾಲ್ಮೀಕಿಯವರು ಎಂದು ಶಂಕರನಾರಾಯಣ ಸರಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಪಾಂಡುರಂಗ ಹೇಳಿದ್ದಾರೆ.

ಕುಂದಾಪುರ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಕುಂದಾಪುರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಂಘಟನೆಗಳ ಸಹಯೋಗದೊಂದಿಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಅತ್ಯಂತ ಮಹತ್ವದ ಕೊಡುಗೆ ರಾಮಾಯಣ ಮಹಾಕಾವ್ಯ. ಶ್ರೀರಾಮನ ಆದರ್ಶ ಜೀವನ, ಸೀತಾದೇವಿಯ ತ್ಯಾಗ, ಲಕ್ಷ್ಮಣನ ಸಹೋದರ ಪ್ರೀತಿ, ಭರತನ ನಿಷ್ಠೆ ಮತ್ತು ಹನುಮಂತನ ಭಕ್ತಿಯನ್ನು ರಾಮಾಯಣವು ಮನೋಜ್ಞವಾಗಿ ಚಿತ್ರಿಸುತ್ತದೆ. ಕುಟುಂಬದ ಸಂಬಂಧಗಳು, ಕರ್ತವ್ಯನಿಷ್ಠೆ, ನ್ಯಾಯ, ಧರ್ಮಪಾಲನೆ ಮತ್ತು ಸಾಮಾಜಿಕ ಹೊಣೆಗಾರಿ ಕೆಯಂತಹ ಮೌಲ್ಯಗಳನ್ನು ಈ ಮಹಾಕಾವ್ಯ ಸಾರುತ್ತದೆ ಎಂದರು.

ವಾಲ್ಮೀಕಿಯವರ ಸಾಹಿತ್ಯವು ಭಾರತೀಯ ಸಂಸ್ಕೃತಿ, ಕಲೆ, ಸಂಗೀತ, ನಾಟಕ ಮತ್ತು ಜನಪದ ಪರಂಪರೆಯ ಮೇಲೆ ಮಹತ್ವದ ಪ್ರಭಾವ ಬೀರಿದೆ. ವಾಲ್ಮೀಕಿಯವರ ಜೀವನದ ಕುರಿತು ಪ್ರಚಲಿತದಲ್ಲಿರುವ ಪೌರಾಣಿಕ ಕಥನಗಳು ವ್ಯಕ್ತಿಯ ಜೀವನದಲ್ಲಿ ಪರಿವರ್ತನೆ ಸಾಧ್ಯ ಎಂಬ ಸಂದೇಶವನ್ನು ನೀಡುತ್ತವೆ. ಆತ್ಮಾವಲೋಕನ, ತಪಸ್ಸು ಮತ್ತು ಜ್ಞಾನಸಾಧನೆಯ ಮೂಲಕ ಉನ್ನತ ಆದರ್ಶಗಳನ್ನು ಸಾಧಿಸಬಹುದು ಎಂಬುದನ್ನು ಅವರ ಜೀವನಗಾಥೆ ಪ್ರತಿಬಿಂಬಿಸುತ್ತದೆ. ಅವರ ಆದರ್ಶಗಳನ್ನು ಪಾಲಿಸಿದರೆ ಜೀವನಕ್ಕೆ ಅರ್ಥ ಬರುತ್ತದೆ ಎಂದು ಅವರು ತಿಳಿಸಿದರು.

ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಂದಾಪುರ ಪುರಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಭಾಕರ ವಿ. ಮತ್ತು ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ರಾಜ್ಯ ಸಂಚಾಲಕ ಡಾ.ಉದಯಕುಮಾರ್ ತಲ್ಲೂರು ಮಾತನಾಡಿದರು.

ಇದೇ ಸಂದರ್ಭ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಾದ ಮಿಥುನ್, ದಿವ್ಯಾ, ಆಂಜನೇಯ, ಹರ್ಷಿತಾ, ಚೇತನ್ ಹಾಗೂ ರಾಹುಲ್ ರಾಠಿ ಅವರನ್ನು ಗೌರವಿಸಲಾಯಿತು.

ಗ್ರೇಡ್-2 ತಹಶೀಲ್ದಾರ್ ವಸಂತ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ತಾಪಂ. ಸಹಾಯಕ ನಿರ್ದೇಶಕ ಸುಧಾಕರ ಶೆಟ್ಟಿ, ಜಿಲ್ಲಾ ದೌರ್ಜನ್ಯ ಜಾಗೃತ ಸಮಿತಿ ಸದಸ್ಯ ರಾಜು ಬೆಟ್ಟಿನಮನೆ, ಕೊರಗ ಸಮುದಾಯದ ಮುಖಂಡರಾದ ಸುಶೀಲಾ ನಾಡ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ ಕುಲಾಲ್ ಸ್ವಾಗತಿಸಿದರು. ರಾಧಿಕಾ ರಾಣಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor