ಕುಂದಾಪುರ, ಅ.30: ರಾಷ್ಟ್ರೀಯ ಹೆದ್ದಾರಿ 66ರ ಸೌಪರ್ಣಿಕಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅರಾಟೆ ಹಳೆ ಸೇತು ವೆಯ ದುರಸ್ತಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಕಳೆದ ಎರಡು ವರ್ಷಗಳಿಂದ ಹೊಸ ಸೇತುವೆ ಮೇಲೆ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಸೇತುವೆ ಪರಿಸರದಲ್ಲಿ ನಿರಂತರ ಅಪಘಾತ ಗಳು ಸಂಭವಿಸಿ ಸಾವು- ನೋವುಗಳು ಉಂಟಾಗುತಿದ್ದವು.

ಇದರ ವಿರುದ್ಧ ಜನರ ಆಕ್ರೋಶದಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಇದೀಗ ಸಂಚಾರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರ ನಿರ್ದೇಶನದಂತೆ ಎನ್‌ಎಚ್‌ಎಐ ಹಾಗೂ ಐಆರ್‌ಬಿ ಸಹಯೋಗದಲ್ಲಿ ಕುಂದಾಪುರ ಸಂಚಾರಿ ಪೊಲೀಸ್ ಠಾಣೆ ಮತ್ತು ಗಂಗೊಳ್ಳಿ ಪೊಲೀಸ್ ಠಾಣೆಯ ವತಿ ಯಿಂದ ಕಾಶಿಮಠದಿಂದ ಸೇತುವೆಯ ಅಂತ್ಯದವರೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸೇತುವೆಯ ದ್ವಿಮುಖ ರಸ್ತೆಯ ಎರಡೂ ಬದಿಗಳಲ್ಲಿ ಒಟ್ಟು 17 ಸುರಕ್ಷತಾ ದೀಪಗಳು, 20ಕ್ಕೂ ಮಿಕ್ಕಿ ಸೂಚನಾ ಫಲಕಗಳು ಹಾಗೂ 3 ಸೋಲಾರ್ ಬ್ಲಿಂಕರ್‌ಗಳನ್ನು ಅಳವಡಿಸಲಾಗಿದೆ. ರಸ್ತೆಯ ಮಧ್ಯಭಾಗದಲ್ಲಿ ನಿರ್ದಿಷ್ಟ ಅಂತರದಲ್ಲಿ ಪ್ಲಾಸ್ಟಿಕ್ ಬ್ಯಾರಿಯರ್‌ಗಳನ್ನು ಇರಿಸಿ, ಹಗ್ಗದ ಮೂಲಕ ಪರಸ್ಪರ ಜೋಡಿಸಲಾಗಿದೆ.

ಈ ಮೂಲಕ ವಾಹನಗಳು ಅಡ್ಡಾದಿಡ್ಡಿಯಾಗಿ ಚಲಿಸುವುದು, ಅಜಾಗರೂಕತೆಯ ಓವರ್‌ಟೇಕಿಂಗ್ ಹಾಗೂ ವಾಹನಗಳು ಸ್ಕಿಡ್ ಆಗುವ ಅಪಾಯವನ್ನು ತಗ್ಗಿಸಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಸುರಕ್ಷಿತ ವಾಹನ ಸಂಚಾರಕ್ಕೆ ಅಗತ್ಯ ತಾತ್ಕಾಲಿಕ ಕ್ರಮ ಗಳನ್ನು ಕೈಗೊಳ್ಳಲಾಗಿದೆ. ಇನ್ನೂ ಕೆಲವು ಕಾಮಗಾರಿಗಳು ಬಾಕಿಯಿದ್ದು ಶೀಘ್ರ ಪೂರ್ಣಗೊಳಿಸಲಾಗುವುದು. ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿದರೆ ಅಪಘಾತಗಳನ್ನು ತಡೆಯಬಹುದು.

-ಅನೂಪ್ ನಾಯಕ್, ಕುಂದಾಪುರ ಸಂಚಾರ ಪೊಲೀಸ್ ಠಾಣೆ ಪಿಎಸ್ಸೈ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor