ಉಡುಪಿ, ನ.1: ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನವನ್ನು ಪರಿಚಯಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ‘ಗ್ರಾಮಾನುಭವ’ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಇಂದು ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು.

ನಗರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಕಲೆ ಮತ್ತು ಸಂಸ್ಕೃತಿಯ ಅಂಶಗಳನ್ನು ಒಳಗೊಂಡಂತೆ ವಿಶಿಷ್ಟ ಗ್ರಾಮೀಣ ಜೀವನ ದರ್ಶನ ಮಾಡುವ ಪರಿಚಯಾತ್ಮಕ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮವನ್ನು 9 ಮತ್ತು 11ನೇ ತರಗತಿಯ ವಿದ್ಯಾರ್ಥಿ ಗಳಿಗೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಸಚಿವ ರಿಝ್ವಾನ್ ಅರ್ಷದ್ ತಿಳಿಸಿದರು.

ಉಡುಪಿಯ ಅಜ್ಜರ ಕಾಡು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ, ಶಾಲಾ ಶಿಕ್ಷಣ ಇಲಾಖೆಯ ಮೂಲಕ ಜಾರಿಗೊಳ್ಳುತ್ತಿರವ ‘ಗ್ರಾಮಾನುಭವ’ದ ಜಿಲ್ಲಾ ಹಂತದ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಪಂ ಉಪ ಕಾರ್ಯದರ್ಶಿ ಕದ್ರುವಳ್ಳಿ, ಉಡುಪಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಅಶೋಕ ಕಾಮತ್, ಶಿಕ್ಷಣಾಧಿಕಾರಿಗಳಾದ ಗಂಗಾಧರ ಸ್ವಾಮಿ, ಡಿವೈಪಿಸಿ ರಮೇಶ್ ಎಂ ಎನ್, ಮತ್ತು ತಿಪ್ಪೇಶ್ ನಾಯಕ್, ಉಡುಪಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ, ಡಯಟ್‌ನ ಉಪನ್ಯಾಸಕ ಯೋಗಾನರಸಿಂಹಸ್ವಾಮಿ, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಇಂದಿರಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ವಸಂತ್ ಜೋಗಿ ಹಾಗೂ ಗ್ರಾಮಾನುಭವದ ಕೇಂದ್ರ ಬಿಂದುಗಳಾದ ಶಾಲಾ ಮಕ್ಕಳು ಹಾಜರಿದ್ದರು.

ನಗರ ಮಕ್ಕಳು ಹಳ್ಳಿಗೆ: ಕರ್ನಾಟಕ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಗ್ರಾಮಾನುಭವ. ನಗರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಕಲೆ ಮತ್ತು ಸಂಸ್ಕೃತಿಯ ಅಂಶಗಳನ್ನು ಒಳಗೊಂಡಂತೆ ವಿಶಿಷ್ಟ ಗ್ರಾಮೀಣ ಜೀವನವನ್ನು ಪರಿಚಯಿಸುವ ಕಾರ್ಯ ಕ್ರಮ ಇದು. ನಗರ ಪ್ರದೇಶದ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ನೈಜ ಅನುಭವವನ್ನು ಒದಗಿಸುವ ಉದ್ದೇಶದಿಂದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಪಠ್ಯಕ್ರಮದ ಭಾಗವಾಗಿ ಪರಿಚಯಿಸುವ ಮೂಲಕ ಗ್ರಾಮಾನುಭವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತದೆ.

ಗ್ರಾಮಾನುಭವ ಕಾರ್ಯಕ್ರಮದಡಿ ವಿದ್ಯಾರ್ಥಿಗಳನ್ನು ಗ್ರಾಮೀಣ ಪ್ರದೇಶ ಗಳಿಗೆ ಕರೆದೊಯ್ದು, ಗ್ರಾಮೀಣ ಜೀವನ ಶೈಲಿಯನ್ನು ನೇರವಾಗಿ ಅನುಭವಿ ಸುವ ಜೊತೆಗೆ ಕೃಷಿ, ಪಶುಸಂಗೋಪನೆ, ಜನಪದ ಕಲೆ ಮತ್ತು ಸಂಸ್ಕೃತಿಯ ಕುರಿತು ಪರಿಚಯ ಹಾಗೂ ಪ್ರಾಯೋಗಿಕ ಅರಿವು ಪಡೆಯಲು ಅವಕಾಶ ಮಾಡಿಕೊಡಲಾಗುತ್ತದೆ.

ಕಾರ್ಯಕ್ರಮದಡಿ 9 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳು ಪ್ರಗತಿ ಶೀಲ ರೈತರ ಜಮೀನುಗಳು, ರೈತ ಉತ್ಪಾದಕರ ಸಂಸ್ಥೆಗಳು, ಪ್ರಾತ್ಯಕ್ಷಿಕೆ ಘಟಕಗಳು ಮತ್ತು ಇತರ ಅನುಮೋದಿತ ಕ್ಷೇತ್ರಾಧಾರಿತ ಕಲಿಕೆ ಸಂಸ್ಥೆಗಳಿಗೆ ಒಂದು ದಿನದ ಗ್ರಾಮೀಣ ಕ್ಷೇತ್ರ ಅಧ್ಯಯನ ಭೇಟಿ ಮಾಡಲಿದ್ದಾರೆ. ಈ ಭೇಟಿಗಳ ಮೂಲಕ ವಿದ್ಯಾರ್ಥಿಗಳು ಕೃಷಿ, ತೋಟಗಾರಿಕೆ, ಪಶುಪಾಲನೆ, ಮಣ್ಣು ಮತ್ತು ನೀರಿನ ಸಂರಕ್ಷಣಾ ಕ್ರಮಗಳು, ಗ್ರಾಮೀಣ ಉತ್ಪಾದನಾ ವ್ಯವಸ್ಥೆಗಳು ಮತ್ತು ಆಹಾರ ಭದ್ರತೆ ಹಾಗೂ ಸ್ಥಿರ ಅಭಿವೃದ್ಧಿಗೆ ರೈತ ಸಮುದಾಯದ ಕೊಡುಗೆಗಳ ಬಗ್ಗೆ ಪ್ರಾಯೋಗಿಕ ಅನುಭವ ಪಡೆಯುತ್ತಾರೆ.

ಉಡುಪಿ ಜಿಲ್ಲೆಯಲ್ಲಿ: ಜಿಲ್ಲೆಯಲ್ಲಿ ಗ್ರಾಮಾನುಭವಕ್ಕೆ ಉಡುಪಿ ತಾಲೂಕಿನ 3 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳಲ್ಲಿ ಒಂದು ಸರ್ಕಾರಿ ಹಾಗೂ 2 ಖಾಸಗಿ ಅನುದಾನರಹಿತ ಸಂಸ್ಥೆಗಳಿವೆ. 1.ಸರ್ಕಾರಿ ಪದವಿ ಪೂರ್ವ ಕಾಲೇಜು (ಬಾಲಕಿಯರ) ಉಡುಪಿ, 2.ಅಲ್ ಇಸಾನ್ ಅಕಾಡೆಮಿ ಶಾಲೆ ಉಡುಪಿ ಹಾಗೂ 3.ಶ್ರೀನಾರಾಯಣ ಗುರು ಇಂಗ್ಲೀಷ್ ಮೀಡಿಯಂ ಪ್ರೌಢಶಾಲೆ ಮಲ್ಪೆ.

ಮೊದಲ ಹಂತದ ಗ್ರಾಮಾನುಭವದ ಕಾರ್ಯಕ್ರಮದಲ್ಲಿ 50 ಮಂದಿ ವಿದ್ಯಾರ್ಥಿಗಳು ಅನ್ನಪೂರ್ಣ ನರ್ಸರಿ ಪೇತ್ರಿ ಬ್ರಹ್ಮಾವರ ತಾಲೂಕು ಇಲ್ಲಿಗೆ ತೆರಳಿ ಗ್ರಾಮೀಣ ಜೀವನದ ಅನುಭವದ ಜೊತೆಗೆ ಕೃಷಿ ಹಾಗೂ ತೋಟಗಾರಿಕೆಯು ಅನುಭವವನ್ನು ಪಡೆಯಲಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ಶಿಕ್ಷಣ ಸಂಸ್ಥೆಗಳಿಗೆ ಕಾರ್ಯಕ್ರಮವನ್ನು ಸಂಘಟಿಸಲಾಗುವುದು ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor