ಉಡುಪಿ, ನ.1: ಮಾನವ ಜೀವನದಲ್ಲಿ ಆರೋಗ್ಯವು ಅಲ್ಲಾಹನು ನೀಡಿದ ಅಮೂಲ್ಯ ಅನುಗ್ರಹವಾಗಿದೆ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಇಸ್ಲಾಮಿನಲ್ಲಿ ಮಹತ್ವದ ಕಾರ್ಯವಾಗಿದೆ. ಇಸ್ಲಾಂ ಆಧ್ಯಾತ್ಮಿಕ ಜೀವನದ ಜೊತೆಗೆ ದೈಹಿಕ ಆರೋಗ್ಯಕ್ಕೂ ವಿಶೇಷ ಮಹತ್ವ ನೀಡಿದೆ ಎಂದು ರಾಜ್ಯ ಎಸ್‌ವೈಎಸ್ ಉಪಾಧ್ಯಕ್ಷ ಹಾಗೂ ಸುನ್ನೀ ಕೋ-ಆರ್ಡಿನೇಷನ್ ಜಿಲ್ಲಾಧ್ಯಕ್ಷ ಕೆ.ಎ.ಅಬ್ದುರ‌್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ ಹೇಳಿದ್ದಾರೆ.

ರಾಜ್ಯ ಎಸ್‌ವೈಎಸ್ ನಿರ್ದೇಶನದಂತೆ ಉಡುಪಿ ಅಂಜುಮನ್ ಮಸೀದಿ ಸಭಾಂಗಣದಲ್ಲಿ ನಡೆದ ಉಡುಪಿ ಝೋನ್ ಹಿಜಾಮ ಕ್ಯಾಂಪ್ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಪ್ರವಾದಿ ಮುಹಮ್ಮದ್(ಸ.ಅ.) ತಮ್ಮ ಜೀವನದಲ್ಲಿ ಆಚರಿಸಿ ತೋರಿಸಿದ ಹಾಗೂ ಪ್ರೋತ್ಸಾಹಿಸಿದ ಚಿಕಿತ್ಸಾ ವಿಧಾನಗಳಲ್ಲಿ ಹಿಜಾಮ ಪ್ರಮುಖವಾದುದು. ಅವರು ಸ್ವತಃ ಹಿಜಾಮ ಚಿಕಿತ್ಸೆ ಮಾಡಿಸಿಕೊಂಡಿದ್ದು, ಎಲ್ಲರಿಗೂ ಅದರ ಮಹತ್ವವನ್ನು ತಿಳಿಸಿ ಕೊಟ್ಟಿದ್ದಾರೆ. ಆದರೆ ಈ ಚಿಕಿತ್ಸೆ ಯನ್ನು ಸೂಕ್ತ ತರಬೇತಿ ಪಡೆದ ತಜ್ಞರಿಂದ ಸುರಕ್ಷಿತವಾಗಿ ಪಡೆಯುವುದು ಅಗತ್ಯ ಎಂದರು.

ಝೋನ್ ಅಧ್ಯಕ್ಷ ಅಬ್ದುರ‌್ರಶೀದ್ ರಝ್ವಿ ಕಟಪಾಡಿ ನೇತೃತ್ವದಲ್ಲಿ ನಡೆದ ಕ್ಯಾಂಪ್‌ನಲ್ಲಿ ಡಾ.ಮುಹಮ್ಮದ್ ಫಾರೂಕ್ ಉಪ್ಪಿನಂಗಡಿ ಹಿಜಾಮ ಚಿಕಿತ್ಸೆಯ ಮಹತ್ವ ಹಾಗೂ ಅನಿವಾರ್ಯತೆಯ ಕುರಿತು ಮಾಹಿತಿ ನೀಡಿದರು. ಮೌಲಾನ ಮೌಲಾ ಅಲಿ ಅಂಜುಮನ್ ಶುಭ ಹಾರೈಸಿದರು.

ಹನೀಫ್ ಹಾಜಿ ಅಂಬಾಗಿಲು, ಅಬ್ದುಲ್ ವಹೀದ್ ಅಂಜುಮನ್, ಅನ್ವರ್ ಕಟಪಾಡಿ, ಸಿದ್ದೀಕ್ ಅಂಬಾಗಿಲು, ಮುಸ್ತಫಾ ಉಪ್ಪಿನಂಗಡಿ, ಅಬ್ದುಸ್ಸರ್ತ್ತಾ ಉಡುಪಿ ಮುಂತಾದವರು ಉಪಸ್ಥಿತರಿದ್ದರು. ಝೋನ್ ಕಾರ್ಯದರ್ಶಿ ತೌಫಿಕ್ ಅಂಬಾಗಿಲು ಸ್ವಾಗತಿಸಿದರು. ನಾಸಿರ್ ಭದ್ರಗಿರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor