ಉಡುಪಿ ಜಿಲ್ಲಾಮಟ್ಟದ ಈಜು ಸ್ಪರ್ಧೆ ಉದ್ಘಾಟನೆ
ಉಡುಪಿ, ನ.1: ಉಡುಪಿಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾಮಟ್ಟದ ಈಜು ಸ್ಪರ್ಧೆಯನ್ನು ಅಜ್ಜರಕಾಡು ಈಜುಕೊಳದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸ್ಪರ್ಧೆಯನ್ನು ಉದ್ಘಾಟಿಸಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಕೂಡ ಹೆಚ್ಚುತ್ತದೆ. ಇತ್ತೀಚಿಗೆ ಕ್ರೀಡಾಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ತೆರೆದುಕೊಳ್ಳುತ್ತಿರುವುದರಿಂದ ಅಧ್ಯಯನದ ಜೊತೆ ಜೊತೆಯಲ್ಲಿಯೇ ಕ್ರೀಡಾ ವಿಭಾಗದಲ್ಲೂ ಕೂಡ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಬೇಕು. ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಗಳಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು ಎಂದರು.
ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್, ಡಯಟ್ ಪ್ರಾಂಶುಪಾಲ ಡಾ.ಅಶೋಕ್ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ಸಾಫಲ್ಯ ಟ್ರಸ್ಟ್‌ನ ಅಧ್ಯಕ್ಷೆ ರಂಜನಾ ಶೆಟ್ಟಿ, ಪ್ರವರ್ತಕಿ ನಿರುಪಮಾ ಪ್ರಸಾದ್, ಎಸ್‌ಡಿಎಂಸಿ ಗೌರವಾಧ್ಯಕ್ಷೆ ತಾರಾದೇವಿ, ಲತಾ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ರವೀಂದ್ರ ನಾಯಕ್, ನಿತ್ಯಾನಂದ, ಸತ್ಯನಾರಾಯಣ ಜಿ., ವಿಜಯಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ವಿಜಯಕುಮಾರ್ ಶೆಟ್ಟಿ, ಕಿರಣ್ ಕುಮಾರ್ ಶೆಟ್ಟಿ, ವರದರಾಜ ನಾಯಕ್ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪದೋನ್ನತಿ ಹೊಂದಿದ ಲೋಕೇಶ್ ಮತ್ತು ದಾನಿ ಹಾಗೂ ಉಡುಪಿ ಬ್ಲೂಟೂತ್ ಸಂಸ್ಥೆಯ ಡಾ.ರಾಧಿಕಾ ಸೋಮಯಾಜಿ ಅವರನ್ನು ಸನ್ಮಾನಿಸಲಾಯಿತು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರವಿಚಂದ್ರ ಕಾರಂತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿ ವಸಂತ ಜೋಗಿ ವಂದಿಸಿದರು.