ಉಡುಪಿ ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಆಚರಣೆ
ಉಡುಪಿ, ನ.8: ದೀಪಾವಳಿ ಹಬ್ಬದ ಪ್ರಯುಕ್ತ ಎಣ್ಣೆ ಶಾಸ್ತ್ರ ಹಾಗೂ ತೈಲಾಂಭ್ಯಂಜನ ಶ್ರೀಕೃಷ್ಣಮಠ ಪರ್ಯಾಯ ಶೀರೂರು ಮಠದಲ್ಲಿ ರವಿವಾರ ಶಾಸ್ತ್ರೀಯವಾಗಿ ನಡೆಯಿತು.
ಪರ್ಯಾಯ ಶಿರೂರು ಶ್ರೀವೇದವರ್ಧನ ತೀರ್ಥ ಸ್ವಾಮೀಜಿ, ತಮ್ಮ ವಿದ್ಯಾಗುರುಗಳಾದ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಹಾಗೂ ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ಚಂದ್ರಶಾಲೆಯಲ್ಲಿ ಎಣ್ಣೆ ಶಾಸ್ತ್ರ ನೆರವೇರಿಸಿದರು.
ಈ ಸಂದರ್ಭದಲ್ಲಿ ಯತಿಗಳು ಎಣ್ಣೆ ಶಾಸ್ತ್ರ ಪೂರೈಸಿ ಭಕ್ತಾದಿಗಳಿಗೆ ಎಣ್ಣೆ ಶಾಸ್ತ್ರ ಮಾಡಿದರು. ಮಠದ ಸಿಬ್ಬಂದಿಗಳು ಎಣ್ಣೆ ಶಾಸ್ತ್ರ ಪೂರೈಸಿ ತೈಲಾಂಭ್ಯಂಜನ ಮಾಡಿ ಸಂಭ್ರಮಿಸಿದರು. ಅಷ್ಟಮಠದ ವಿದ್ವಾಂಸರು, ಪರ್ಯಾಯ ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ, ಪಾರುಪತ್ಯೆದಾರ ಶ್ರೀಶ ಭಟ್ ಕಡೆಕಾರು ಹಾಗೂ ಭಕ್ತರು, ಸಿಬ್ಬಂದಿಗಳು ಉಪಸ್ಥಿತರಿದ್ದರು.