ಉಡುಪಿ, ನ.8: ಮಾದಕ ದ್ರವ್ಯಮುಕ್ತ ಭಾರತ ನಿರ್ಮಾಣದ ಉದ್ದೇಶದಿಂದ ಯುವಜನರಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಮೈ ಭಾರತ್ ಉಡುಪಿ ಸಹಯೋಗದಲ್ಲಿ ‘ನಶಾಮುಕ್ತ ಯುವ’ ಕಾರ್ಯಕ್ರಮ ಗುರುವಾರ ನಡೆಯಿತು.

ಉಡುಪಿಯ ಶ್ರೀರಾಜೀವ್ ಗಾಂಧಿ ಎಜುಕೇಶನ್ ಅಂಡ್ ವೆಲ್ಫೇರ್ ಟ್ರಸ್ಟ್‌ನ ಸ್ಪಂದನ ಡಿ-ಅಡಿಕ್ಷನ್ ಸೆಂಟರ್‌ನ ಆಪ್ತ ಸಮಾಲೋಚಕ ಅಭಿಷೇಕ್ ಮಾತನಾಡಿ, ಯುವಜನರು ಅರಿವಿಲ್ಲದೆ ಮಾದಕ ದ್ರವ್ಯಗಳ ವ್ಯಸನದ ಸುಳಿಗೆ ಸಿಲುಕು ತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ವ್ಯಸನವೇ ಕಾಯಿಲೆ ಎಂದು ತಿಳಿಯುವ ವೇಳೆಗೆ ಅನೇಕರು ತಮ್ಮ ಯೌವನ ಕಳೆದುಕೊಂಡಿರು ತ್ತಾರೆ. ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವುದಲ್ಲದೆ, ಜೀವನದ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಿಕೇತನ ಮಾತನಾಡಿ, ಅನೇಕ ಕೌಟುಂಬಿಕ ಸಮಸ್ಯೆಗಳ ಮೂಲ ಮದ್ಯಪಾನ ಮತ್ತು ಮಾದಕ ದ್ರವ್ಯ ವ್ಯಸನವಾಗಿದೆ. ವ್ಯಸನವು ವ್ಯಕ್ತಿಯ ಬದುಕನ್ನು ಮಾತ್ರವಲ್ಲದೆ ಇಡೀ ಕುಟುಂಬದ ನೆಮ್ಮದಿಯನ್ನು ಹಾಳುಮಾಡುತ್ತದೆ. ಆದ್ದರಿಂದ ಯುವಜನತೆ ಎಚ್ಚೆತ್ತು ಕೊಂಡು ದುಶ್ಚಟಗಳಿಂದ ದೂರವಿರಬೇಕು. ಜಾಗೃತ ಹಾಗೂ ಜವಾಬ್ದಾರಿ ಯುತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದರು.

ಸ್ಪಂದನ ಡಿ-ಅಡಿಕ್ಷನ್ ಸೆಂಟರ್‌ನ ಯೋಜನಾ ನಿರ್ದೇಶಕಿ ನಿಶಾ ಶೆಟ್ಟಿ, ಮಾದಕ ದ್ರವ್ಯ ಸೇವನೆಯಿಂದ ಉಂಟಾ ಗುವ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಮೈ ಭಾರತ್ ಉಡುಪಿಯ ನಿರ್ವಾಹಕಿ ಶ್ಯಾಮಲಾ ಮಾದಕ ದ್ರವ್ಯ ವಿರೋಧಿ ಭಾರತ ನಿರ್ಮಾಣದ ಪ್ರತಿಜ್ಞಾವಿಧಿ ಬೋಧಿಸಿದರು.

ಕಾಲೇಜಿನ ಮಾದಕ ದ್ರವ್ಯ ವಿರೋಧಿ ಸಮಿತಿಯ ಸಂಚಾಲಕ ಡಾ. ರವೀಶ್ ಬಿ. ಸ್ವಾಗತಿಸಿದರು. ಮೈ ಭಾರತ್‌ನ ಜಿಲ್ಲಾ ನೋಡಲ್ ಅಧಿಕಾರಿ ಡಾ.ಸಫಿಯಾ, ಶೈಕ್ಷಣಿಕ ಸಂಯೋಜಕರಾದ ಉಮಾಶ್ರೀ ಹಾಗೂ ಸುನೀತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೃತಿ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಪಡಿರ್ಯಾ ಪ್ರಾರ್ಥಿಸಿದರು. ಸಿಂಧು ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor