ಸಾಧಕರಿಗೆ ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ ಪ್ರದಾನ
ಉಡುಪಿ, ಜ.8: ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆಯ ಆಶ್ರಯದಲ್ಲಿ ಸಾಹಿತಿ ಮೇಟಿ ಮುದಿಯಪ್ಪ ನೆನಪಿನ ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ ಪ್ರದಾನ ಕಾರ್ಯಕ್ರಮ ರವಿವಾರ ಮಲಬಾರ್ ಗೋಲ್ಡ್ ಉಡುಪಿ ಶಾಖೆಯಲ್ಲಿ ಜರಗಿತು.
ಮಕ್ಕಳ ಸಾಹಿತ್ಯದಲ್ಲಿ ಸಾಹಿತಿ ಇಂದಿರಾ ಹಾಲಂಬಿ, ಸಮಗ್ರ ಸಾಹಿತ್ಯದಲ್ಲಿ ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಅನುವಾದ ಸಾಹಿತ್ಯದಲ್ಲಿ ಲೇಖಕ ಜಯಪ್ರಕಾಶ್ ಪುತ್ತೂರು ಅವರಿಗೆ ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ ವನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇಂದಿರಾ ಹಾಲಂಬಿ, ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಶೈಕ್ಷಣಿಕ, ತಾಂತ್ರಿಕ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಯಾಗಿದೆ. ಆದರೆ ಜನರು ಸುಖಿಗಳಾಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹಿಂದಿನ ಎಲ್ಲಾ ಸಾಧಕರು ಮಾತೃಭಾಷೆಯಲ್ಲೇ ಶಿಕ್ಷಣ ಪಡೆದಿದ್ದಾರೆ. ಆದರೆ ಇಂದು ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸ ಲಾಗುತ್ತದೆ. ಬುದ್ಧಿವಂತ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸುತ್ತಾರೆ. ಸಾಧಾರಣ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಕಷ್ಟವಾಗುತ್ತಿದೆ. ಇದರಿಂದ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಹಿನ್ನಡೆಯಾಗಿದೆ ಎಂದರು.
ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸ ನಾಡೋಜ ಪ್ರೊ.ಕೆ.ಪಿ.ರಾವ್ ವಹಿಸಿದ್ದರು. ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ನಿರಂಜನ ಚೋಳಯ್ಯ, ಉದ್ಯಮಿ ವಿಶ್ವನಾಥ ಶೆಣೈ, ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಪ್ರೊ.ಶಂಕರ್, ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥ ವಿಜಯಕುಮಾರ್ ಉಪಸ್ಥಿತರಿದ್ದರು.
ಪ್ರತಿಷ್ಠಾನ ಸಂಚಾಲಕ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಜನಾರ್ದನ್ ಸ್ವಾಗತಿಸಿದರು. ರಾಜೇಶ್ ಪಣಿಯಾಡಿ ಕಾರ್ಯಕ್ರಮ ನಿರೂಪಿಸಿದರು. ಪುರಸ್ಕಾರ ಸಮಿತಿಯ ಸಂಚಾಲಕಿ ಸಂಧ್ಯಾ ಶೆಣೈ ವಂದಿಸಿದರು.