ಉಡುಪಿ : ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರು ನೀಡಿರುವ ತಮ್ಮ ಸಮಸ್ಯೆಗಳ ಅಹವಾಲು ಗಳನ್ನು ಅಧಿಕಾರಿಗಳು ನಿಗದಿತ ಕಾಲಾವಧಿಯಲ್ಲಿ ಸ್ಪಂದಿಸಿ ಅರ್ಜಿಗಳನ್ನು ನಿಯಮಾನು ಸಾರ ವಿಲೇವಾರಿ ಮಾಡಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಮಣಿಪಾಲ ರಜತಾದ್ರಿಯಲ್ಲಿರುವ ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರಜಾಸೇವಾ ಆಂದೋಲನದಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿ ಕುರಿತಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜನಸಾಮಾನ್ಯರ ಅಹವಾಲುಗಳನ್ನು ಅವರಿದ್ದಲ್ಲಿಯೇ ಹೋಗಿ ಬಗೆಹರಿಸುವ ಉದ್ದೇಶದಿಂದ ಸರಕಾರ ಪ್ರಜಾಸೇವಾ ಆಂದೋಲನವನ್ನು ಪ್ರಾರಂಭಿಸಿದೆ. ಈ ಆಂದೋಲನದಲ್ಲಿ ಜನರು ನೀಡಿದ ಅಹವಾಲುಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನಿಯಮಾನುಸಾರ ಸಮಸ್ಯೆಗಳನ್ನು ಅನಗತ್ಯ ವಿಳಂಬ ಮಾಡದೇ ಪ್ರಾಮಾಣಿಕವಾಗಿ ಬಗೆಹರಿಸಿ ಹಿಂಬರಹ ನೀಡಬೇಕು ಎಂದರು.

ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳು ಬಂದಾಗ ವಿಷಯಾಧಾರಿತ ವಾಗಿ ಯಾವ ಇಲಾಖೆ ಅಡಿಯಲ್ಲಿ ಬರುತ್ತದೆ ಎಂಬುದನ್ನು ಮನಗಂಡು ಅವುಗಳನ್ನು ಆ ಇಲಾಖೆಗೆ ವಿಲೇವಾರಿಗೆ ನೀಡಬೇಕು.ಒಂದೊಮ್ಮೆ ಅವು ತಮ್ಮ ವ್ಯಾಪ್ತಿಯ ಇಲಾಖೆಗೆ ಬರುವುದಿಲ್ಲ ಅಥವಾ ಇತರೆ ತಾಲೂಕಿಗೆ ಬರುತ್ತದೆ ಎಂದು ಕಂಡುಬಂದಲ್ಲಿ ತಕ್ಷಣವೇ ಸಂಬಂಧಪಟ್ಟ ತಾಲೂಕು ಅಥವಾ ಇಲಾಖೆಗೆ ಹಂಚಿಕೆಮಾಡಬೇಕು. ಅದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳದೇ ಸಭೆಯಲ್ಲಿಯೇ ತಿಳಿಸುವುದು ಸೂಕ್ತ ಎಂದರು.

ಸಾರ್ವಜನಿಕ ಸಮಸ್ಯೆಗಳನ್ನು ಕೆಳ ಹಂತದಲ್ಲಿಯೇ ಬಗೆಹರಿಸುವಂತದ್ದು ಇದ್ದಲ್ಲಿ ಕೂಡಲೇ ಸ್ಪಂದಿಸಿ, ಪರಿಹಾರ ಕಂಡುಕೊಂಡು ಅವರಿಗೆ ಹಿಂಬರಹ ವನ್ನು ಆದ್ಯತೆಯಲ್ಲಿ ನೀಡಬೇಕು. ಹಾಗೂ ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ಅದನ್ನು ನಮೂದು ಮಾಡಬೇಕು. ಒಂದೊಮ್ಮೆ ನಿಯಮಾನುಸಾರ ಕೆಲವು ಬಗೆಹರಿಸದೇ ಇರುವ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಉತ್ತರ ನೀಡಬೇಕು. ಅಸಂಬದ್ಧ ಉತ್ತರ ನೀಡುವುದು ಖಂಡಿತ ಸರಿಯಲ್ಲ ಎಂದರು.

ಜನಸಾಮಾನ್ಯರು ಒಂದೇ ಅರ್ಜಿಯಲ್ಲಿ ತಮ್ಮ ಅನೇಕ ಸಮಸ್ಯೆಗಳನ್ನು ನಮೂದು ಮಾಡಿ, ನೀಡುತ್ತಿರುವುದು ಕಂಡುಬಂದಿದೆ. ಆದಷ್ಟು ಅರ್ಜಿಗಳನ್ನು ಪಡೆಯುವಾಗ ಪ್ರತಿಯೊಂದು ಸಮಸ್ಯೆಗಳಿಗೂ ಪ್ರತ್ಯೇಕ ಅರ್ಜಿಯನ್ನು ಪಡೆದು ಸಂಬಂಧಪಟ್ಟ ಇಲಾಖೆಗಳಿಗೆ ಅವುಗಳನ್ನು ನೀಡಿ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎಎಸ್‌ಪಿ ಸುಧಾಕರ್ ನಾಯಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಸಹಾಯಕ ಕಮಿಷನರ್ ಮಹೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರ್‌ಗಳು ಹಾಗೂ ಇತರರು ಉಪಸ್ಥಿತರಿದ್ದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor