ಕುಂದಾಪುರ, ನ.12: ಕೃಷಿ, ಅಂತರ್ಜಲ ಮಟ್ಟ ಹೆಚ್ಚಳ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ 2006-07ರಲ್ಲಿ ಸೌಪರ್ಣಿಕ ನದಿಗೆ ಸೇನಾಪುರ ಗ್ರಾಮದ ಬಂಟ್ವಾಡಿಯಲ್ಲಿ ನಿರ್ಮಿಸಲಾದ ಉಪ್ಪು ನೀರಿನ ತಡೆಗೋಡೆ (ವೆಂಟೆಡ್ ಡ್ಯಾಂ) ಅವೈಜ್ಞಾನಿಕವಾಗಿದ್ದು, ಇದರಿಂದ ನಾಡ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ಉಪ್ಪು ನೀರಿನ ಸಮಸ್ಯೆಯಾಗುತ್ತಿದೆ. ಅದಕ್ಕಾಗಿ ನಾಡದ ಕೋಣ್ಕಿ ಹಾಗೂ ಹೇರೂರು ಗ್ರಾಮಗಳ ಮಧ್ಯೆ ಕಿಂಡಿ ಅಣೆ ಕಟ್ಟು ರಚಿಸಬೇಕು ಎಂದು ಡಿವೈಎಫ್‌ಐ ಪಡುಕೋಣೆ ಘಟಕದ ಕಾರ್ಯದರ್ಶಿ ರಾಜೇಶ್ ಪಡುಕೋಣೆ ಒತ್ತಾಯಿಸಿದ್ದಾರೆ.

ಗುರುವಾರ ಕುಂದಾಪುರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಮಳೆ ಕಡಿಮೆಯಿದ್ದು, ಬರಗಾಲದ ಪರಿಸ್ಥಿತಿಯಿದೆ. ಎಲ್ಲೆಡೆ ನೀರಿನ ಸಮಸ್ಯೆಯಿದೆ. ಈಗ ತಾತ್ಕಾಲಿಕವಾಗಿ ಉಪ್ಪು ನೀರನ್ನು ತಡೆಯಲು ಈ ಬಂಟ್ವಾಡಿ ಡ್ಯಾಮ್ ನಿರ್ವಹಣೆ ಸರಿಯಾಗಿ ಮಾಡಿ, ಉಪ್ಪು ನೀರು ಒಳಗೆ ಬರದಂತೆ ತಡೆಯಬೇಕು ಎಂದವರು ಹೇಳಿದರು.

ಕೋಣ್ಕಿ - ಹೇರೂರು ಮಧ್ಯೆ ಹೊಸ ಕಿಂಡಿ ಅಣೆಕಟ್ಟಿಗೆ ಅಂದಾಜು ಎಷ್ಟು ಅನುದಾನ ಅಗತ್ಯವಿದೆ ಎಂದು ಸರ್ವೇ ನಡೆಸಿ, ಸರಕಾರಕ್ಕೆ ಬೈಂದೂರಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ಅವರ ಕಚೇರಿ ಮುಂಭಾಗದಲ್ಲಿ ಸದ್ಯದಲ್ಲಿಯೇ ನಾಡ, ಹಡವು, ಬಡಾಕೆರೆ ಹಾಗೂ ಸೇನಾಪುರ ಗ್ರಾಮಸ್ಥರೆಲ್ಲ ಒಗ್ಗೂಡಿ ಹೋರಾಟ ನಡೆಸುತ್ತೇವೆ ಎಂದು ರಾಜೇಶ್ ಪಡುಕೋಣೆ ಎಚ್ಚರಿಸಿದರು.

ಬಂಟ್ವಾಡಿ ಅಣೆಕಟ್ಟು ಉಪ್ಪು ನೀರನ್ನು ತಡೆಯಲು ಸಂಪೂರ್ಣ ವಿಫಲ ವಾಗಿದೆ. ಡ್ಯಾಂನ ಹೊರ ಹಾಗೂ ಒಳ ಭಾಗ ಎರಡೂ ಕಡೆ ಉಪ್ಪು ನೀರು ಇರುತ್ತದೆ. ಇದರಿಂದ 4 ಗ್ರಾಮಗಳಿಗೆ ನೀರುಣಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮಾರ್ಚ್, ಎಪ್ರಿಲ್, ಮೇನಲ್ಲಿ ಉಪ್ಪು ನೀರು ಬರುತ್ತಿದೆ. 81 ಕಿಂಡಿಗಳ ಪೈಕಿ 28 ಕಿಂಡಿಗಳಿಗೆ ರೇಡಿಯಲ್ ಗೇಟ್ ಅಳವಡಿಸಿದ್ದರೂ, ಉಪ್ಪು ನೀರಿನ ಒಳ ಹರಿವು ಕಡಿಮೆಯಾಗಿಲ್ಲ. 2022-23 ರಲ್ಲಿ ಬಹುಗ್ರಾಮ ಕುಡಿಯುವ 1 ಲೀ. ನೀರಿನಲ್ಲಿ ಕ್ಲೋರೈಡ್ ಅಂಶ 1 ಸಾವಿರ ಮಿ.ಗ್ರಾಂ. ಗಿಂತಲೂ ಹೆಚ್ಚಿತ್ತು ಎಂದು ವರದಿಯಲ್ಲಿದೆ. ಆದರೂ ಬೇಸಗೆಯಲ್ಲಿ ಈ ಭಾಗದ 29 ಜನ ವಸತಿ ಪ್ರದೇಶದ ಗ್ರಾಮಸ್ಥರು ಉಪ್ಪು ಮಿಶ್ರಿತ ನೀರು ಕುಡಿಯುವ ಪರಿಸ್ಥಿತಿಯಿದೆ ಎಂದವರು ದೂರಿದರು.

ಡಿವೈಎಫ್‌ಐ ಮಾಜಿ ಅಧ್ಯಕ್ಷ ರಾಜೀವ ಪಡುಕೋಣೆ ಮಾತನಾಡಿ, ಪ್ರತ್ಯೇಕ ವೆಂಟೆಡ್ ಡ್ಯಾಂಗಾಗಿ ನಡೆದ ಹೋರಾ ಟದ ಬಳಿಕ ಡಿಸಿ ಸಭೆ ನಡೆಸಿ, ಎನ್‌ಐಟಿಕೆ ತಜ್ಞರ ಸಮಿತಿ ಅಧ್ಯಯನ ನಡೆಸಿ, ವರದಿ ನೀಡುವಂತೆ ಸೂಚಿಸಿದ್ದರು. ಕಳೆದ ಮೇನಲ್ಲಿ ನೀಡಿದ ಆ ವರದಿಯಲ್ಲಿ ಉಪ್ಪು ನೀರಿನ ಮಟ್ಟವು ಸಿಹಿ ನೀರಿನ ಮಟ್ಟಕ್ಕಿಂತ ಹೆಚ್ಚಿದೆ. ಅಲೆಗಳ ಉಬ್ಬರವಿಳಿತದ ಮಟ್ಟ ತಡೆಯಲು ಡ್ಯಾಂ ಎತ್ತರ ಸಾಕಾಗಲ್ಲ. ಕಿಂಡಿಗಳನ್ನು ಸರಿಯಾಗಿ ಮುಚ್ಚುತ್ತಿಲ್ಲ ಎಂದು ತಿಳಿಸಿದೆ ಎಂದರು.

ಅರಬಿ ಸಮುದ್ರ ಹತ್ತಿರದಲ್ಲೇ ಇರುವುದರಿಂದ ಉಪ್ಪು ನೀರು ನುಸುಳುವ ಸಂಭವವಿದೆ ಎಂದು ವರದಿ ತಿಳಿಸಿದೆ. ಹಾಗಾದರೆ ಜನರ ತೆರಿಗೆ ಹಣದಲ್ಲಿ ಅಧಿಕಾರಿಗಳು ದುರುಪಯೋಗಪಡಿಸಿ, ನಿಷ್ಪ್ರಯೋಜಕ ಡ್ಯಾಂ ನಿರ್ಮಿಸಿದ್ದು, ಈ ಬಗ್ಗೆ ಒಂದು ತನಿಖಾ ತಂಡ ರಚಿಸಿ, ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ಡಿವೈಎಫ್‌ಐ ಉಪಾಧ್ಯಕ್ಷೆ ಶೋಭಾ ಕೆರೆಮನೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor