ಕಾರ್ಕಳ: ಶಿಕ್ಷಣ ತಜ್ಞ ಡಾ.ಎನ್.ಆರ್. ಶೆಟ್ಟಿ ನಿಧನ
ಕಾರ್ಕಳ: ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ, ಎನ್ಐಟಿಕೆ ನಿವೃತ್ತ ಪ್ರಾಂಶುಪಾಲ, ಶಿಕ್ಷಣ ತಜ್ಞ ಡಾ. ಎನ್.ಆರ್. ಶೆಟ್ಟಿ (90) ನ.12ರಂದು ನಿಧನ ಹೊಂದಿದರು.
ಮೂಲತಃ ನಿಟ್ಟೆ ಗ್ರಾಮದ ಕುಂಟಲ್ಪಾಡಿ ನಿವಾಸಿಯಾಗಿದ್ದ ಡಾ. ಎನ್.ಆರ್. ಶೆಟ್ಟಿ ಗುರುವಾರ ಮುಂಜಾನೆ ಕೊನೆಯುಸಿರೆಳೆದರು.
ಡಾ. ಎನ್.ಆರ್. ಶೆಟ್ಟಿಯವರು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಪದವಿ ಪಡೆದು ಇಂಗ್ಲೆಂಡ್ನ ಎಸೆಕ್ಸ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ (ಆಪ್ಟೋ-ಇಲೆಕ್ಟ್ರಾನಿಕ್ಸ್) ಮತ್ತು ಮುಂಬೈ ಐಐಟಿ (IIT Bombay) ಯಿಂದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪಿಎಚ್ ಡಿ ಪದವಿ ಪಡೆದಿದ್ದರು.
ಸುರತ್ಕಲ್ NITK ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಎರಡು ಅವಧಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ(IGNCA)ದ ಸದಸ್ಯ ಕಾರ್ಯದರ್ಶಿಯಾಗಿ ಮತ್ತು ಮುಖ್ಯ ಕಾರ್ಯನಿರ್ವಾಹಕರಾಗಿಯೂ ಕರ್ತವ್ಯ ಸಲ್ಲಿಸಿದ್ದರು. ಕಲಬುರಗಿಯ ಕರ್ನಾಟಕ ಕೇಂದ್ರ ವಿಶ್ವವಿದ್ಯಾನಿಲಯದ ಕುಲಾಧಿಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ನಿಟ್ಟೆ ಸಮೂಹ ಸಂಸ್ಥೆಗಳ ಸಂಸ್ಥಾಪಕ ಎನ್. ವಿನಯ ಹೆಗ್ಡೆಯವರ ಪತ್ನಿಯ ಅಕ್ಕ ವತ್ಸಲಾ ಆರ್. ಶೆಟ್ಟಿ ಅವರನ್ನು ವರಿಸಿದ್ದ ಎನ್. ಆರ್. ಶೆಟ್ಟಿ, ಬೆಂಗಳೂರು ಯಲಹಂಕದಲ್ಲಿರುವ ನಿಟ್ಟೆ ಕಾಲೇಜಿನ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ನಿಟ್ಟೆ ಕಾಲೇಜಿನ ನಿರ್ದೇಶಕರಾಗಿ ಸಂಸ್ಥೆಯನ್ನು ಮುನ್ನಡೆಸಿದ್ದರು. ನಿವೃತ್ತಿ ಬಳಿಕ ಕುಂಟಲ್ಪಾಡಿಯಲ್ಲಿ ನೆಲೆಸಿದ್ದ ಅವರು ಶೈಕ್ಷಣಿಕ ಮಾತ್ರವಲ್ಲದೇ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆ ನೀಡಿದವರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.