ಉಡುಪಿ : ಯಾವುದೇ ಸಂಸ್ಥೆಯ ದಕ್ಷತೆಯನ್ನು ಅದರ ಲೆಕ್ಕಪತ್ರಗಳ ನಿರ್ವಹಣೆಯ ಗುಣಮಟ್ಟ ನಿರ್ಧರಿಸುತ್ತದೆ. ಸಾರ್ವಜನಿಕ ಹಣಕಾಸಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಾತರಿಪಡಿಸುವಲ್ಲಿ ಲೆಕ್ಕಪರಿಶೋಧನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಾಜ್ಯದ ಉಪ ಮಹಾಲೇಖಪಾಲ ಯಾಮಿನಿ ಟಿ.ಎಂ. ಹೇಳಿದ್ದಾರೆ.

ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐಕ್ಯೂಎಸಿ ಹಾಗೂ ಸ್ನಾತಕೋತ್ತರ ವಿಭಾಗಗಳ ಸಹಯೋಗದಲ್ಲಿ ಬೆಂಗಳೂರಿನ ಕರ್ನಾಟಕದ ಪ್ರಧಾನ ಮಹಾಲೇಖಪಾಲರ (ಲೆಕ್ಕಪರಿಶೋಧನೆ-1) ಕಚೇರಿ ವತಿಯಿಂದ ಶನಿವಾರ ಕಾಲೇಜಿನಲ್ಲಿ ಲೆಕ್ಕಪರಿಶೋಧನಾ ದಿನಾಚರಣೆ’(ಆಡಿಟ್ ದಿವಸ್) ಅಂಗವಾಗಿ ಆಯೋಜಿಸಲಾದ ‘ಭಾರತದ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಕಚೇರಿಯ ಕುರಿತು ತಿಳಿಯಿರಿ ಮತ್ತು ಲೆಕ್ಕಪರಿಶೋಧಕ ರಾಗಿ’ ಎಂಬ ವಿಷಯದ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡುತಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು ಹಾಗೂ ಲೆಕ್ಕಪತ್ರಗಳ ಲೆಕ್ಕಪರಿಶೋಧನೆ ನಡೆಸುವ ಜವಾಬ್ದಾರಿ ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರಿಗೆ ಇದೆ. ರಾಜ್ಯಮಟ್ಟದಲ್ಲಿ ಮಹಾಲೇಖಪಾಲರ ಕಚೇರಿಗಳ ಮೂಲಕ ಈ ಕಾರ್ಯನಿರ್ವಹಿಸಲಾಗುತ್ತದೆ ಎಂದರು.

ಲೆಕ್ಕಪರಿಶೋಧನಾ ವರದಿಗಳನ್ನು ಸಿದ್ಧಪಡಿಸಿ ಸಂಸತ್ತಿನಲ್ಲಿ ಮಂಡಿಸುವ ಪ್ರಕ್ರಿಯೆಯ ಬಗ್ಗೆ ವಿವರಿಸಿದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಹಾಗೂ ಸಾರ್ವಜನಿಕ ಉದ್ದಿಮೆಗಳ ಸಮಿತಿಗಳು ವರದಿಗಳಲ್ಲಿನ ಪ್ರಮುಖ ಅಂಶಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಪಡೆಯುತ್ತವೆ. ಸಾರ್ವಜನಿಕ ಹಿತದೃಷ್ಟಿ ಯಿಂದ ಶಿಫಾರಸುಗಳನ್ನು ಮಾಡುತ್ತವೆ. ಇದರಿಂದ ಸರಕಾರಿ ಹಣದ ಬಳಕೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಸಾಧ್ಯವಾಗುತ್ತದೆ ಎಂದರು.

ಹಿರಿಯ ಲೆಕ್ಕಪರಿಶೋಧನಾಧಿಕಾರಿ ಮಲ್ಲಿಕೇಶ್ವರಿ ಸಿ. ಲೆಕ್ಕಪರಿಶೋಧನಾ ಇಲಾಖೆಯಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಿಕೇತನ ವಹಿಸಿದ್ದರು.

ಸಹಾಯಕ ಲೆಕ್ಕಪರಿಶೋಧನಾಧಿಕಾರಿ ವಿಶಾಲ್ ಕುಮಾರ್ ಛತ್ವಾಣಿ, ಎಂ.ಕಾಂ. ವಿಭಾಗದ ಸಂಯೋಜಕ ಡಾ.ಅಬ್ದುಲ್ ರಜಾಕ್, ಸಹಾಯಕ ಪ್ರಾಧ್ಯಾಪಕರಾದ ಸಂತೋಷ್ ಪ್ರಭು ಎಂ., ರಾಕೇಶ್, ಸೋನಿಯಾ ಮರಿಯೆಟ್ ನೊರೊನ್ಹಾ, ಸ್ಮಿತಾ ಉಪಸ್ಥಿತರಿದ್ದರು. ರಿಹಾ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು. ಅಭಿಲಾಷಾ ಹೆಗ್ಡೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor