ಜಾಗತಿಕ ಸವಾಲುಗಳಿಗೆ ಜ್ಞಾನವೊಂದೇ ಉತ್ತರವಲ್ಲ: ಪ್ರೊ.ಮಲೋನ್
ಮಾಹೆ ಘಟಿಕೋತ್ಸವದ 3ನೇ ದಿನ 1,468 ಮಂದಿಗೆ ಪದವಿ ಪ್ರದಾನ
ಉಡುಪಿ, ನ.21: ಜಗತ್ತು ಇಂದು ಎದುರಿಸುತ್ತಿರುವ ಸವಾಲುಗಳಿಗೆ ಜ್ಞಾನವೊಂದೇ ಉತ್ತರವಲ್ಲ. ಅದರೊಂದಿಗೆ ಬರುವ ಸಹಯೋಗವೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬ್ರಿಟನ್ನ ಲ್ಯಾಂಕಾಸ್ಟರ್ ವಿಶ್ವವಿದ್ಯಾನಿಲಯದ ಸಂಶೋಧನೆ ಮತ್ತು ಉದ್ಯಮ ವಿಭಾಗದ ಸಹಕುಲಪತಿ ಪ್ರೊ.ಜೋ ರೈಕ್ರಾಫ್ಟ್ ಮನೋನ್ ಅಭಿಪ್ರಾಯಪಟ್ಟಿದ್ದಾರೆ.
ಮಣಿಪಾಲ ಕೆಎಂಸಿ ಗ್ರೀನ್ಸ್ನಲ್ಲಿ ನಡೆದಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ನ (ಮಾಹೆ) 34ನೇ ಘಟಿಕೋತ್ಸವದ ಮೂರನೇ ದಿನದಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣದಲ್ಲಿ ಮಾತನಾಡುತಿದ್ದರು. ಮೂರನೇ ದಿನದಲ್ಲಿ 40 ಮಂದಿ ಪಿಎಚ್ಡಿ ಸಂಶೋಧಕರು ಸೇರಿದಂತೆ 1,468 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಜಾಗತಿಕ ಮಟ್ಟದ ಸವಾಲುಗಳನ್ನು ಸಮಷ್ಟಿ ಭಾವದಲ್ಲಿ ಎದುರಿಸ ಬೇಕಾಗಿದೆ. ಜ್ಞಾನ ಪಡೆಯುವುದು ಎಷ್ಟು ಮುಖ್ಯವೋ ಅದನ್ನು ಸರಿಯಾಗಿ ಬಳಸುವ ಹೊಣೆಗಾರಿಯೂ ಅಷ್ಟೇ ಮುಖ್ಯ. ಆರೋಗ್ಯ ಕ್ಷೇತ್ರ ಮತ್ತು ಸಮಾಜದಲ್ಲಿ ಇಂದು ವಿಜ್ಞಾನ, ತಂತ್ರಜ್ಞಾನ ಮತ್ತು ಎಐ ದೊಡ್ಡ ಬದಲಾವಣೆ ತರುತ್ತಿವೆ. ಇಂಥ ಸಂದರ್ಭದಲ್ಲಿ ಪದವೀಧರರು ಸಮಷ್ಟಿ ಭಾವದಲ್ಲಿ ಸಾಮಾಜಿಕ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸ ಬೇಕು ಎಂದರು.
ಮಾಹೆ ಮತ್ತು ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯಗಳ ನಡುವಿನ ಸಹಭಾಗಿತ್ವ ಸದೃಢಗೊಳ್ಳುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಪ್ರೊ. ರೈಕ್ರಾಫ್ಟ್ ಮಲೋನ್, ಎರಡು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಬಹುಶಿಸ್ತೀಯ ವಿನಿಮಯಕ್ಕೆ ಉತ್ತೇಜನ ಸಿಗುತ್ತಿದೆ. ಸಮಾಜದ ಒಳಿತಿ ಗಾಗಿ ಜೊತೆಗೂಡಿ ಶ್ರಮಿಸಲು ಇದರಿಂದ ಸಾಧ್ಯವಾಗುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಮಾಹೆಯ ಶೈಕ್ಷಣಿಕ ಮತ್ತು ಸಂಶೋಧನ ಸಾಧನೆಗಳ ವಿವರಗಳನ್ನು ನೀಡಿದ ಕುಲಪತಿ ಡಾ.ಶರತ್ ಕೆ. ರಾವ್, ಅವರು, ಪದವೀಧರರ ಸಾಧನೆಯನ್ನು ಸಂಭ್ರಮಿಸುತ್ತಿರುವ ಹೊತ್ತಿನಲ್ಲಿ, ಅವರ ಶೈಕ್ಷಣಿಕ ಯಶಸ್ಸಿನ ಜತೆಗೆ ಭವಿಷ್ಯ ವನ್ನು ರೂಪಿಸುವ ಅವರ ಸಾಮರ್ಥ್ಯವನ್ನೂ ಗುರುತಿಸುತ್ತಿದ್ದೇವೆ. ಜ್ಞಾನ, ವೃತ್ತಿಪರತೆಯ ಜತೆಗೆ ಪ್ರಾಮಾಣಿಕತೆ, ಹೊಸ ಆಲೋಚನೆ ಹಾಗೂ ಸಾಮಾಜಿಕ ಹೊಣೆಗಾರಿಕೆ ಹೊಂದಿರುವ ವ್ಯಕ್ತಿಗಳನ್ನು ರೂಪಿಸಲು ಮಾಹೆ ಬದ್ಧವಾಗಿದೆ ಎಂದರು.
ಮಾಹೆ ಟ್ರಸ್ಟ್ನ ಟ್ರಸ್ಟಿ ವಸಂತಿ ಆರ್. ಪೈ, ಮಾಹೆ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಸೇರಿದಂತೆ ಮಾಹೆ ವಿವಿಯ ಹಿರಿಯ ಅಧಿಕಾರಿಗಳು, ವಿಭಾಗ ಮುಖ್ಯಸ್ಥರು, ವಿವಿಧ ಸಂಸ್ಥೆಗಳ ಮುಖ್ಯಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಆರು ಮಂದಿಗೆ ಚಿನ್ನದ ಪದಕ: ದಿನದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ತೋರಿರುವ ಮಾಹೆಯ ಆರು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಡಾ. ಟಿಎಂಎ ಪೈ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು. ಹಿಮಾಂಶಿ ಶರ್ಮಾ (ಮಿಶಾ ಮಣಿಪಾಲ), ಅಭಿಶ್ರೀ ಅಯ್ಯಂಗಾರ್ (ವಾಗ್ಷಾ), ಆಕಾಶ್ಕಾ ಕಲಾಂ(ಎಂಸಿಒಪಿಎಸ್ ಮಣಿಪಾಲ), ಸುಫಿಯಾ ತರಾನಮ್ (ಎಂಎಸ್ಐಎಸ್ ಮಣಿಪಾಲ), ಪೂರ್ಣಿಮಾ ಮನೋಜ್ (ಎಂಸಿಎಚ್ಪಿ ಮಣಿಪಾಲ) ಹಾಗೂ ಶ್ರೀಕೃಷ್ಣ ಎಚ್.ದಾಮೋದರ ಕೆದ್ಲಾಯ (ಎಂಎಸ್ಎಲ್ಎಸ್ ಮಣಿಪಾಲ).