ಮಂಗಳೂರು/ಉಡುಪಿ, ಸೆ.30: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ (ಡೀಮ್ಡ್ ವಿವಿ) ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯಕ್ಕೆ ಬೆಂಗಳೂರಿನಲ್ಲಿರುವ ಜಪಾನ್ ಕಾನ್ಸುಲ್ ಜನರಲ್ ನವಾತಾ ಹಿರೋಶಿ ಅವರು ಅಕ್ಟೋಬರ್ 1ರಂದು ಭೇಟಿ ನೀಡಲಿದ್ದು, ನಿಟ್ಟೆ ಫ್ಯೂಚರ್ ಸ್ಪೇಸ್ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಉತ್ಕೃಷ್ಟತಾ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎಸ್.ಮೂಡಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ವಿಶಾಲ್ ಹೆಗ್ಡೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜಪಾನಿನ ಉದ್ಯಮ, ತಂತ್ರಜ್ಞಾನ ಮತ್ತು ಕಾರ್ಪೊರೇಟ್ ಕ್ಷೇತ್ರದ ಪ್ರಭಾವಿ ನಾಯಕರು ಭಾಗವಹಿಸಲಿದ್ದಾರೆ. ಜಪಾನ್ ತಕಾವೊ ಕೊಗ್ಯೊ ಕಂಪೆನಿಯ ಅಧ್ಯಕ್ಷ ಮತ್ತು ಸಿಇಒ ಯುತಕಾ ಶಿಮೊಮುರಾ , ಆಟೋಲಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಆರ್‌ಡಿಇ ಜನರಲ್ ಮ್ಯಾನೇಜರ್ ಮಲ್ಲಿಕಾರ್ಜುನ ಬಿ; ವಿಫ್ಲಿ ಇಂಡಿಯಾ ಕಾರ್ಯಾಚರಣೆಗಳ ಮುಖ್ಯಸ್ಥ ಸುಮಂತ್ ಪಡಿವಾಳ್, ಕೊಬಯಾಶಿ ಕ್ರಿಯೇಟ್ ಇಂಡಿಯಾದ ನಿರ್ದೇಶಕ ಕೋಕಿ ಕಾತೊ, ಬೆಂಗಳೂರಿನಲ್ಲಿರುವ ಜಪಾನ್‌ನ ಉಪ ಕಾನ್ಸುಲ್ ಜುನ್ ಹೊಮ್ಮ ಮುಂತಾದವರು ಭಾಗವಹಿಸಲಿದ್ದಾರೆ.

ನಿಟ್ಟೆ ಸಂಸ್ಥೆಯು ಇಂತಹ ಯೋಜನೆಗಳ ಮೂಲಕ ತನ್ನ ವಿದ್ಯಾರ್ಥಿಗಳಿಗೆ ಜಪಾನಿನಲ್ಲಿ ಉದ್ಯೋಗದ ಅವಕಾಶ ಗಳನ್ನು ಸೃಷ್ಟಿಸುತ್ತಿದೆ. ನಿಟ್ಟೆ ತಾಂತ್ರಿಕ ಕಾಲೇಜಿನೊಂದಿಗಿನ ಒಡಂಬಡಿಕೆಯ ಮೂಲಕ ನಿಡೆಕ್ ಸಂಸ್ಥೆ 60ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿದೆ.ಟಿಕೆಇ ನೇರವಾಗಿ 38 ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿದ್ದು, ಇನ್ನೂ 34 ನಿಯೋಜನೆಗಳನ್ನು ಸಕ್ರಿಯಗೊಳಿಸಿದೆ.

2026ರ ಆಗಸ್ಟ್‌ವರೆಗೆ ನಿಟ್ಟೆ ಸಂಸ್ಥೆಯು ಜಪಾನಿನ 40 ಕಂಪನಿಗಳಲ್ಲಿ ಒಟ್ಟು 320ಕ್ಕೂ ಅಧಿಕ ವಿದ್ಯಾರ್ಥಿಗಳ ನಿಯೋಜನೆಗಳನ್ನು ದಾಖಲಿಸಿದೆ. 2026 ಒಂದರಲ್ಲೇ ನಿಟ್ಟೆಯ 115 ವಿದ್ಯಾರ್ಥಿಗಳು ಜಪಾನಿನಲ್ಲಿ ಉದ್ಯೋಗ ಪಡೆದಿದ್ದಾರೆ.

ಆದ್ದರಿಂದ ಕಾನ್ಸುಲ್ ಜನರಲ್ ಅವರ ಭೇಟಿಯು ಈ ಸಹಯೋಗಗಳನ್ನು ಮತ್ತಷ್ಟು ವಿಸ್ತರಿಸುವ ಮೂಲಕ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಜಾಗತಿಕ ಉದ್ಯೋಗ ಕ್ಷೇತ್ರದಲ್ಲಿ ತಮ್ಮ ತಾಂತ್ರಿಕ ಶಿಕ್ಷಣವನ್ನು ಬಳಸಿಕೊಳ್ಳಬಯಸುವ ಎಂಜಿನಿಯರಿಂಗ್ ಪದವೀಧರ ರಿಗೆ ಉತ್ತಮ ವೇದಿಕೆಯಾಗಿದೆ ಎಂದು ನಿಟ್ಟೆ ವಿದ್ಯಾಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor