ಮೇ 22ರಂದು ಬಡಗಬೆಟ್ಟು ಸೊಸೈಟಿಯ ನೂತನ ಕುಂದಾಪುರ ಶಾಖೆ ಉದ್ಘಾಟನೆ
ಕುಂದಾಪುರ, ಮೇ 20: ಪ್ರತಿಷ್ಠಿತ ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 12ನೇ ನೂತನ ಕುಂದಾಪುರ ಶಾಖೆಯು ಮೇ 22ರಂದು ಬೆಳಗ್ಗೆ 10.30ಕ್ಕೆ ಕುಂದಾಪುರದ ಮುಖ್ಯ ರಸ್ತೆಯ ಪಾರಿಜಾತ ಹೋಟೆಲ್ ಬಳಿಯ ಶ್ರೀನಂದಿಕೇಶ್ವರ ಟವರ್ಸ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಕುಂದಾಪುರದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಶಾಖೆಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ, ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಎಸ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹೇಶ ಹೆಗ್ಡೆ ಮೊಳಹಳ್ಳಿ, ಜಿಲ್ಲಾ ಸಹಕಾರಿ ಉಪನಿಬಂಧಕಿ ಲಾವಣ್ಯ ಕೆ.ಆರ್., ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ. ಭಾಗವಹಿಸಲಿದ್ದಾರೆ ಎಂದರು.
107 ವರ್ಷಗಳ ಇತಿಹಾಸದ ಈ ಸಂಘವು 40 ವರ್ಷಗಳಿಂದೀಚಿಗೆ ಉತ್ತಮ ಲಾಭದಾಯಕ ರೀತಿಯಲ್ಲಿ ಮುನ್ನಡೆ ಯುತ್ತಿದೆ. ಪ್ರಸ್ತುತ 23 ಸಾವಿರ ಸದಸ್ಯರಿದ್ದು, 662 ಕೋ.ರೂ. ಠೇವಣಿ, 528 ಕೋ.ರೂ. ಸದಸ್ಯರ ಹೊರಬಾಕಿ ಸಾಲ ಹೊಂದಿದೆ. 113.24 ಕೋ.ರೂ. ನಿಧಿ, 284.07 ಕೋ.ರೂ. ಹೂಡಿಕೆ, 795 ಕೋ.ರೂ. ದುಡಿಯುವ ಬಂಡ ವಾಳ, 2025-26 ನೇ ಸಾಲಿನಲ್ಲಿ 4,062.29 ಕೋ.ರೂ. ವಾರ್ಷಿಕ ವಹಿವಾಟು ನಡೆಸಿ, 18.13 ಕೋ.ರೂ. ಲಾಭ ಗಳಿಸಿದೆ. 11 ಶಾಖೆಗಳ ಪೈಕಿ 9 ಕಡೆ ಸ್ವಂತ ಕಟ್ಟಡವಿದ್ದು, ಕುಂದಾಪುರದಲ್ಲಿ ಇದು ಮೊದಲ ಶಾಖೆಯಾಗಿದೆ ಮತ್ತು ಸಂಪೂರ್ಣ ಹವಾನಿಯಂತ್ರಿತವಾಗಿದೆ ಎಂದವರು ತಿಳಿಸಿದರು.
ಸಂಘವು ಪ್ರತಿ ವರ್ಷ ಸುಮಾರು 25ಲಕ್ಷ ರೂ. ಹಣವನ್ನು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕೈಂಕರ್ಯಗಳಿಗೆ ವಿನಿಯೋಗಿಸುತ್ತಿದೆ. ಉತ್ತಮ ಆಡಳಿತ, ಆರ್ಥಿಕ ಶಿಸ್ತು, ಸದಸ್ಯ ಸ್ನೇಹಿ ಯೋಜನೆಗಳು, ಪಾರದರ್ಶಕ ಕಾರ್ಯ ವೈಖರಿಗೆ ಈಗಾಗಲೇ ಮೆಚ್ಚುಗೆ ಗಳಿಸಿದೆ. ಚೇತನಾ ಮೊಬೈಲ್ ಆ್ಯಪ್ ಮೂಲಕ ಡಿಜಿಟಲೀಕರಣವನ್ನು ಪರಿಚಯಿ ಸಿದೆ. ನೂತನ ಕುಂದಾಪುರ ಶಾಖೆಯಲ್ಲಿ ಆಕರ್ಷಕ ಠೇವಣಿ ಯೋಜನೆ, ಕಡಿಮೆ ಬಡ್ಡಿದರದಲ್ಲಿ ವಿವಿಧ ಸಾಲ ಸೌಲಭ್ಯ, ಸೇಫ್ ಲಾಕರ್, ಇ- ಸ್ಟಾಂಪಿಂಗ್, ಪಾನ್ ಕಾರ್ಡ್, ಆರೋಗ್ಯ ಕಾರ್ಡ್, ಎಲ್ಲ ವಿಮಾ ಸೇವೆ, ಮೊಬೈಲ್ ಮೂಲಕ ದೈನಿಕ ಠೇವಣಿ ಸಂಗ್ರಹ, ಶೂನ್ಯ ಬ್ಯಾಲೆನ್ಸ್ ವಿದ್ಯಾನಿಧಿ, ಉದ್ಘಾಟನೆ ಪ್ರಯುಕ್ತ ವಿಶೇಷ ಠೇವಣಿ ಬಡ್ಡಿದರ ಸೇವೆಯನ್ನು ಸಹ ಸಂಸ್ಥೆ ಘೋಷಿಸಿದೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜಾರ್ಜ್ ಸಾಮ್ಯುವೆಲ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಕುಂದಾಪುರ ಶಾಖಾ ವ್ಯವಸ್ಥಾಪಕ ಸಮರ್ಥ್ ಶೆಟ್ಟಿ ಉಪಸ್ಥಿತರಿದ್ದರು.