×
Ad

ಜು.3ರಂದು ಬೆಂಗಳೂರಿನಲ್ಲಿ ದಲಿತ ಜನಾಗ್ರಹ ಸಮಾವೇಶ| ಉಡುಪಿಯಿಂದ ಕಾರ್ಯಕರ್ತರು ಭಾಗಿ: ಸುಂದರ್‌ ಮಾಸ್ತರ್

Update: 2026-06-26 18:30 IST

ಉಡುಪಿ, ಜೂ.26: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಮಿತಿಯ ಆಶ್ರಯದಲ್ಲಿ ದಲಿತ ಜನಾಗ್ರಹ ಸಮಾವೇಶವನ್ನು ಜು.3ರಂದು ಬೆಂಗಳೂರು ಪ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಜಿಲ್ಲೆಯಿಂದ 500 ಕಾರ್ಯಕರ್ತರು ಭಾಗವಹಿಸಲಿರುವರು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ದಸಂಸ ಸುಂದರ್ ಮಾಸ್ತರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಸಮಾವೇಶದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್ ನೇತೃತ್ವದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಗಣ್ಯರು, ಬುದ್ಧಿ ಜೀವಿಗಳು, ಪ್ರಗತಿಪರರು, ಸಾಹಿತಿ ಗಳು, ಬರಹಗಾರರು ಮತ್ತು ರೈತ ಮುಖಂಡರು ಭಾಗವಹಿಸಲಿರುವರು. ದಲಿತ ಸಮುದಾಯಗಳಿಗೆ ಭೂಮಿ, ವಸತಿ, ಬ್ಯಾಕ್‌ಲಾಗ್ ಹುದ್ದೆ, ಉದ್ಯೋಗ ನೇಮಕಾತಿ, ವಿಶೇಷ ಘಟಕ ಯೋಜನೆ ಏಕಗವಾಕ್ಷಿ ನೀತಿಗಳನ್ನು ತ್ವರಿತಗೊಳಿಸಬೇಕು ಎಂದು ಆಗ್ರಹಿಸಿ ಈ ಪ್ರತಿಭಟನೆ ನಡೆಯಲಿವೆ ಎಂದರು.

ವಿಶೇಷ ಘಟಕ ಯೋಜನೆ ಹಣವನ್ನು ನಿಯಮಬಾಹಿರವಾಗಿ ಸೆಕ್ಷನ್ 24ರ ಕಾಯ್ದೆ ಉಲ್ಲಂಘಿಸಿ ಸಾರಿಗೆ ಇಲಾಖೆ ಸಿಬ್ಬಂದಿಗಳ ವೇತನಕ್ಕೆ ನೀಡಿರುವ 200ಕೋಟಿ ರೂ. ಅಧಿಕ ಹಣವನ್ನು ಮರು ವಸೂಲಿ ಮಾಡಬೇಕು. ವಿಶೇಷ ಘಟಕ ಯೋಜನೆ ಅನುಷ್ಠಾನಕ್ಕೆ ಏಕಗವಾಕ್ಷಿ ನೀತಿ ಜಾರಿಗೊಳಿಸಬೇಕು. ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಬಳಸಿಕೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಪರಿಶಿಷ್ಟರ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಈ ಪ್ರತಿಭಟನೆಯನ್ನು ಉಡುಪಿ ಜಿಲ್ಲಾ ಸಮಿತಿಯು ಸಂಪೂರ್ಣವಾಗಿ ಬೆಂಬಲಿಸಿದ್ದು ಉಡುಪಿ ಜಿಲ್ಲೆಯಿಂದ 10 ಬಸ್‌ಗಳಲ್ಲಿ 500 ಕಾರ್ಯ ಕರ್ತರು ಭಾಗವಹಿಸಲಿದ್ದಾರೆ. ಜಿಲ್ಲೆಯ ಸ್ವಾಭಿಮಾನಿ ಕಾರ್ಯಕರ್ತರು, ಚಳುವಳಿಯ ಬೆಂಬಲಿಗರು ಈ ಹೋರಾಟಕ್ಕೆ ಪ್ರೋತ್ಸಾಹ, ಸಹಕಾರ ನೀಡಬೇಕು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು, ಜಿಲ್ಲಾ ಸಮಿತಿಯ ಸದಸ್ಯ ಸುರೇಶ್ ಬಾರ್ಕೂರು, ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ್ ಹಕ್ಲಾಡಿ, ಬ್ರಹ್ಮಾವರ ತಾಲೂಕು ಸಂಚಾಲಕ ಶ್ಯಾಮಸಂದರ ತೆಕ್ಕಟ್ಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News