×
Ad

ಪಂಚ ಗ್ಯಾರಂಟಿ ಯೋಜನೆಯಲ್ಲಿ ಕುಂದಾಪುರಕ್ಕೆ ಈವರೆಗೆ 582 ಕೋಟಿ ರೂ. ಬಿಡುಗಡೆ: ಹರಿಪ್ರಸಾದ್ ಶೆಟ್ಟಿ

Update: 2026-06-25 20:50 IST

ಕುಂದಾಪುರ, ಜೂ.25: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿಗೆ ಈವರೆಗೆ 287,24,44,000 ರೂ. ಬಿಡುಗಡೆಯಾಗಿದ್ದರೆ ಉಳಿದಂತೆ ಎಲ್ಲಾ ಐದು ಯೋಜನೆಗಳಡಿ ಇದುವರೆಗೆ 582.50 ಕೋಟಿ ರೂ.ಬಿಡುಗಡೆಯಾಗಿದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಹರಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಗುರುವಾರ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಉಳಿದಂತೆ ಗೃಹಜ್ಯೋತಿಯಡಿ ಮೇ ತಿಂಗಳಿನಲ್ಲಿ 4,48,80,698 ರೂ. ಸೇರಿದಂತೆ ಈವರೆಗೆ ಒಟ್ಟು 141,57,76,520 ರೂ., ಅನ್ನಭಾಗ್ಯದಡಿ ಈವರೆಗೆ 63,73,39,224 ರೂ., ಯುವನಿಧಿ ಯೋಜನೆಯಡಿ ಮೇ ನಲ್ಲಿ 31,59,00 ರೂ., ಈವರೆಗೆ ಒಟ್ಟು 3,54,84,000 ರೂ., ಶಕ್ತಿ ಯೋಜನೆಯಡಿ ಮೇ ತಿಂಗಳಿನಲ್ಲಿ 3,43,96,060 ರೂ. ಸೇರಿದಂತೆ ಈವರೆಗೆ ಒಟ್ಟು 86,39,91,271 ರೂ. ಬಿಡುಗಡೆಯಾಗಿದೆ. ಒಟ್ಟಾರೆಯಾಗಿ ತಾಲೂಕಿಗೆ ಮೇ ತಿಂಗಳಲ್ಲಿ 8,24,35,758 ರೂ. ಸೇರಿದಂತೆ ಈವರೆಗೆ 582,50,42,015 ರೂ. ಬಿಡುಗಡೆಯಾಗಿದೆ ಎಂದು ಅವರು ವಿವರಿಸಿದರು.

ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಗೊಂಡು ಮೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯಲ್ಲಿ ಆಡಳಿತಾತ್ಮಕವಾಗಿ ಪಾರದರ್ಶಕತೆ ಕಾಪಾಡಿಕೊಳ್ಳುವ ಸಲುವಾಗಿ ಪರಿಷ್ಕರಣೆ ಆಗುತ್ತದೆ. ಅರ್ಹ ಫಲಾನುಭವಿ ಗಳಿಗೆ ಸೌಲಭ್ಯ ತಲುಪಿಸುವುದು, ಗ್ಯಾರಂಟಿ ಯೋಜನೆಯ ದುರ್ಬಳಕೆ ತಡೆಗಟ್ಟುವುದು ಇದರ ಉದ್ದೇಶವಾಗಿದೆ. ನಿಜವಾದ ಫಲಾನುಭವಿ ಸೌಲಭ್ಯದಿಂದ ವಂಚಿತವಾಗಬಾರದು. ಹಾಗಾಗಿ ಪರಿಷ್ಕರಣೆ ನಡೆಯುತ್ತಿದ್ದು, ಇದರಲ್ಲಿ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರ ಜವಾಬ್ದಾರಿಯೂ ಇದೆ ಎಂದರು.

ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೆಎಸ್ಸಾರ್ಟಿಸಿ ಬಸ್ ಸಂಚರಿಸಲು ಅಧಿಕಾರಿಗಳು ಗಮನ ಹರಿಸಬೇಕು. ಯಾವ ಮಾರ್ಗಕ್ಕೆ ಬಸ್ ತುರ್ತು ಅಗತ್ಯವಿದೆ ಎನ್ನುವುದನ್ನು ಮನಗಂಡು, ಬಸ್ ಹೊಂದಾಣಿಕೆ ಮಾಡಿಕೊಂಡು ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹರಿಪ್ರಸಾದ್ ಶೆಟ್ಟಿ ಸಲಹೆ ನೀಡಿದರು.

ರಸ್ತೆ ಬದಿಯಲ್ಲಿರುವ ಮರದ ಅಪಾಯಕಾರಿ ಗೆಲ್ಲು ತೆರವು ಮಾಡಬೇಕು. ವಿದ್ಯುತ್ ತಂತಿಯ ಮೇಲ್ಬಾಗದಲ್ಲಿ ಆಕೇಶಿಯಾ ಮರಗಳ ರೆಂಬೆ ಕೊಂಬೆಗಳು ಬಾಗಿಕೊಂಡಿದ್ದು, ಅರಣ್ಯ ಇಲಾಖೆ ಸಮನ್ವಯತೆ ಕೊರತೆಯಿಂದ ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವು ಮಾಡಿಲ್ಲ ಎಂದು ಸಮಿತಿ ಸದಸ್ಯರಾದ ವಸುಂಧರ ಹೆಗ್ಡೆ ಹಾಗೂ ಚಂದ್ರ ಅಮೀನ್ ದೂರಿದರು.

ಹಾಲಾಡಿ-ಹುಣ್ಸೆಮಕ್ಕಿ ರಸ್ತೆಯಲ್ಲಿ ಎರಡು ಕಡೆ ಅಕೇಶಿಯ ಮರಗಳು ವಿದ್ಯುತ್ ತಂತಿಗೆ ತಾಗಿಕೊಂಡಿವೆ. ಮಳೆಗಾಲದಲ್ಲಿ ಈ ಮರಗಳು ಬಿದ್ದರೆ ವಿದ್ಯುತ್ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಕಂಬಗಳು ಮುರಿದು ಹೋಗುತ್ತವೆ. ಕೂಡಲೇ ತೆರವು ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು.

ದಕ್ಕೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆ.ಜಿ. ಉತ್ತರಿಸಿ, ಮುಂದಿನ ಸಭೆಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಸುವುದಾಗಿ ತಿಳಿಸಿದರು. ಮೆಸ್ಕಾಂ ಅಧಿಕಾರಿಗಳು ಮಾತನಾಡಿ ಈಗಾಗಲೇ ಅಪಾಯಕಾರಿ ಮರಗಳು ಇರುವ ಸ್ಥಳಗಳ ಪಟ್ಟಿ ಮಾಡಿದ್ದೇವೆ. ಲಿಖಿತವಾಗಿ ಆರ್‌ಎಫ್‌ಓ ಗಮನಕ್ಕೂ ತಂದಿದ್ದೇವೆ ಎಂದರು.

ಸ್ಮಾರ್ಟ್ ಮೀಟರ್ ಅಳವಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಈಗಾಗಲೇ 413 ಸ್ಮಾರ್ಟ್ ಮೀಟರ್ ಅಳವಡಿಕೆಯಾಗಿದೆ. ಈಗ ಇರುವ ಮೀಟರ್‌ಗಿಂತ ಸ್ಮಾರ್ಟ್ ಮೀಟರ್ ಅತ್ಮಾಧುನಿಕವಾಗಿದ್ದು 4,800 ರೂ ಆಗುತ್ತದೆ ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು.

ಸದಸ್ಯರಾದ ನಾರಾಯಣ ಆಚಾರ್ ಕೋಣಿ ಮಾತನಾಡಿ, ಟಾಟಾ ಪವರ್ ಕಾರ್ಪೋರೇಷನ್ ಲಿಮಿಟೆಡ್ ಸಲ್ಲಿಸಿರುವ ಖಾಸಗಿ ಅರ್ಜಿಯ ಬಗ್ಗೆ ಗಮನ ಸೆಳೆದರು. ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಮೆಸ್ಕಾಂ ನೌಕರರು ಕೂಡ ಇದಕ್ಕೆ ವಿರೋಧ ಇದ್ದೇವೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

2,256 ಮಂದಿಯ ಒಂದಕ್ಕೂ ಹೆಚ್ಚು ಖಾತೆಗೆ ಹಣ

ಗೃಹಲಕ್ಷ್ಮೀ ಯೋಜನೆಯಲ್ಲಿ ಫೆಬ್ರವರಿವರೆಗೆ ಹಣ ಪಾವತಿಯಾಗಿದೆ. ಇದರ 47,564 ಫಲಾನುಭವಿಗಳ ಪೈಕಿ 2,256 ಮಂದಿಗೆ ಒಂದಕ್ಕಿಂತ ಹೆಚ್ಚು ಖಾತೆಗಳಿಗೆ ಹಣ ಪಾವತಿಯಾಗುವ ಮಾಹಿತಿ ಸಿಕ್ಕಿದೆ. ಫಲಾನುಭವಿಗಳು ಬೇರೆ ಬೇರೆ ಬ್ಯಾಂಕುಗಳಲ್ಲಿ ಆಧಾರ್ ಸೀಡಿಂಗ್ ಮಾಡಿರುವುದರಿಂದ ಈ ರೀತಿ ಗೊಂದಲ ಉಂಟಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಆಧಾರ್ ಸೀಡಿಂಗ್ ಸಮಸ್ಯೆಯಿಂದ ಈ ಸಮಸ್ಯೆ ಕಂಡು ಬಂದಿದೆ ಹೊರತು ಹಣ ದುರುಪಯೋಗವಾಗಿಲ್ಲ ಎಂದು ಅಧ್ಯಕ್ಷ ಹೆಚ್.ಹರಿಪ್ರಸಾದ್ ಶೆಟ್ಟಿ ಸಭೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News