ಜೂ.5: ಚಂದ್ರಶೇಖರ ದಾಮ್ಲೆಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ
ಉಡುಪಿ, ಜೂ.4: ಯಕ್ಷಗಾನ ಕಲಾರಂಗ ವಿದ್ವಾಂಸರಿಗೆ ನೀಡುವ ‘ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭ ಜೂ.5ರ ಸಂಜೆ 4 ಗಂಟೆಗೆ ಸಂಸ್ಥೆಯ ಐವೈಸಿ ಸಭಾಭವನದಲ್ಲಿ ನಡೆಯಲಿದೆ.
ಹಿರಿಯ ವಿದ್ವಾಂಸರಾದ ಡಾ.ಚಂದ್ರಶೇಖರ ದಾಮ್ಲೆ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಹೊರನಾಡು ಶ್ರೀಅನ್ನಪೂರ್ಣೇಶ್ವರೀ ದೇವಸ್ಥಾನ ಧರ್ಮದರ್ಶಿ ಡಾ. ಜಿ. ಭೀಮೇಶ್ವರ ಜೋಶಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಂಗಳೂರಿನ ಹಿರಿಯ ವಿದ್ವಾಂಸರೂ, ವಿಶ್ರಾಂತ ಕುಲಪತಿಗಳೂ ಆದ ಡಾ.ಬಿ. ಎ.ವಿವೇಕ ರೈ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಯಕ್ಷಗಾನದ ಯುವ ಕಲಾವಿದರಿಗೆ ಆಯೋಜಿಸಿದ್ದ ನಾಲ್ಕು ದಿನಗಳ ಸನಿವಾಸ ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.