×
Ad

ಉಡುಪಿ: ನ.14ರಿಂದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ

Update: 2025-11-13 20:02 IST

ಉಡುಪಿ: ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಹಾಗೂ ಉಡುಪಿ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ನ.14ರಿಂದ 20ರವರೆಗೆ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಗಳು ಉಡುಪಿ ಜಿಲ್ಲೆಯಾದ್ಯಂತ ನಡೆಯಲಿವೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ತಿಳಿಸಿದರು. ಸಪ್ತಾಹದ ಅವಧಿಯಲ್ಲಿ ಪ್ರತಿಯೊಂದು ಸಹಕಾರ ಸಂಘದ ಕಚೇರಿಯ ಆವರಣದಲ್ಲಿ ಏಳು ಬಣ್ಣಗಳ ಸಹಕಾರ ಧ್ವಜವನ್ನು ಹಾರಿಸಲಾಗುವುದು ಮತ್ತು ಸಹಕಾರ ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸಲು ಸಹಕಾರ ಪ್ರಚಾರ ರಥವನ್ನು 7 ದಿನಗಳ ಕಾಲ ಸಹಕಾರ ಸಪ್ತಾಹ ನಡೆಯುವ ಸ್ಥಳಗಳಿಗೆ ಕಳುಹಿಸಲಾಗುವುದು ಎಂದರು.

ಸಹಕಾರ ಸಪ್ತಾಹದ ಉದ್ಘಾಟನೆ ನ.14ರ ಶುಕ್ರವಾರ ಬೆಳಿಗ್ಗೆ 10:30ಕ್ಕೆ ಮಂದಾರ್ತಿ ಯ ಶ್ರೀದುರ್ಗಾ ಸಹಕಾರ ಸೌಧದ ಶ್ರೀಚಾಮುಂಡೇಶ್ವರಿ ಸಭಾಂಗಣದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸಹಕಾರ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ.

ಸಭಾ ಕಾರ್ಯಕ್ರಮಕ್ಕೂ ಮೊದಲು ಒಂದು ವಾರ ಜಿಲ್ಲೆಯಾದ್ಯಂತ ಸಂಚರಿಸುವ ಸಹಕಾರ ರಥಕ್ಕೆ ಚಾಲನೆ ನೀಡಲಾಗುವುದು. ಈ ಬಾರಿಯ ಸಹಕಾರ ಸಪ್ತಾಹದ ಧ್ಯೇಯವಾಕ್ಯ ‘ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು’ ಎಂಬುದಾಗಿದೆ ಎಂದವರು ತಿಳಿಸಿದರು.

ನ.15ರಂದು ಅಪರಾಹ್ನ 3:00 ಗಂಟೆಗೆ ಹೆಮ್ಮಾಡಿಯ ಹೆಮ್ಮಾಡಿ ಮೀನುಗಾರರ ಸಹಕಾರ ಸಂಘದ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ‘ತ್ರಿಭುವನ್ ಸಹಕಾರ ವಿಶ್ವವಿದ್ಯಾಲಯ: ಸಂಶೋಧನೆ ಮತ್ತು ತರಬೇತಿ’ಯಿಂದ ಸಹಕಾರ ಶಿಕ್ಷಣದಲ್ಲಿ ಪರಿವರ್ತನೆ ಎಂಬ ವಿಷಯದೊಂದಿಗೆ ಎರಡನೇ ದಿನದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ನ.16ರಂದು ಬೆಳಗ್ಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ’ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ ಎಂಬ ವಿಷಯದೊಂದಿಗೆ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ರಾಜ್ಯಮಟ್ಟದ ನಾಯಕರು ಭಾಗವಹಿಸಲಿದ್ದು, ಅಂದು ಉಡುಪಿ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮವಿರುವುದಿಲ್ಲ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ನ.17ರಂದು ಬೆಳಿಗ್ಗೆ 9:30ಕ್ಕೆ ಪಡುಬಿದ್ರೆ ಸಹಕಾರಿ ವ್ಯವಸಾಯಿಕ ಸೊಸೈಟಿಯ ವೈ ಲಕ್ಷ್ಮಣ ಸಭಾಂಗಣದಲ್ಲಿ ‘ರಾಷ್ಟ್ರೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾರತದ ಸಹಕಾರ ಸಂಸ್ಥೆಗಳ ರಚನಾತ್ಮಕ ಮಾರ್ಗಸೂಚಿ’ ಎಂಬ ವಿಷಯದೊಂದಿಗೆ ನಾಲ್ಕನೇ ದಿನದ ಕಾರ್ಯಕ್ರಮ ಜರುಗಲಿದೆ. ನ.18ರಂದು ಅಪರಾಹ್ನ 3ಗಂಟೆಗೆ ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಸಮೃದ್ಧಿ ಸಹಕಾರ ಸೌಧದಲ್ಲಿ ‘ಸಹಕಾರಿ ಉದ್ಯಮ ಶೀಲತೆಯಿಂದ ಯುವಜನ, ಮಹಿಳಾ ಮತ್ತು ಅಬಲ ವರ್ಗದ ಸಬಲೀಕರಣ’ ಎಂಬ ವಿಷಯದೊಂದಿಗೆ ಐದನೇ ದಿನದ ಕಾರ್ಯಕ್ರಮ ನಡೆಯಲಿದೆ.

ನ.19ರಂದು ಬೆಳಗ್ಗೆ 10:30ಕ್ಕೆ ಹೆಬ್ರಿಯ ಬಂಟರ ಭವನದಲ್ಲಿ ‘ಪ್ರವಾಸೋದ್ಯಮ, ಆರೋಗ್ಯ, ಹಸಿರು ಇಂಧನ, ಫ್ಲಾಟ್‌ಫಾರಂ ಸಹಕಾರಿ ಸಂಸ್ಥೆಗಳು, ಕಿಚನ್ ಸಹಕಾರ ಸಂಘಗಳು ಮತ್ತಿತರ ಉದಯೋನ್ಮುಖ ಸಹಕಾರ ಸಂಘಗಳನ್ನು ಅನುಕೂಲಕರ ಪ್ರದೇಶಗಳಿಗೆ ವಿಸ್ತರಣೆ’ ಎಂಬ ವಿಷಯ ದೊಂದಿಗೆ ಆರನೇ ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಪ್ತಾಹದ ಸಮಾರಂಭ ನ.20ರಂದು ಬೆಳಿಗ್ಗೆ 10:30ಕ್ಕೆ ನಾಗೂರು ಒಡೆಯರಮಠ ಶ್ರೀಗೋಪಾಲಕೃಷ್ಣ ಕಲಾಮಂದಿರ ಕಿರಿಮಂಜೇಶ್ವರದಲ್ಲಿ ‘ಜಾಗತಿಕ ಸ್ಪರ್ಧಾತ್ಮಕತೆಗಾಗಿ ನವನವೀನ್ಯತೆಯ ಸಹಕಾರಿ ವ್ಯವಹಾರದ ಮಾದರಿಗಳು’ ಎಂಬ ವಿಷಯದೊಂದಿಗೆ ನಡೆಯಲಿದೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಹಕಾರ ಯೂನಿಯನ್ ನಿರ್ದೇಶಕರಾದ ಅಲೆವೂರು ಹರೀಶ್ ಕಿಣಿ, ವೈ.ಸುಧೀರ್ ಕುಮಾರ್, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅನುಷಾ ಕೋಟ್ಯಾನ್, ಮ್ಯಾನೇಜರ್ ವಿಶ್ವನಾಥ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News